ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚುನಾವಣೆ ಬಳಿಕ ಮಾರಾಮಾರಿ; ದೂರು

Lingaraj Badiger
Updated On : 8 Mar 2013, 10:55 am

ಸಿಂಧನೂರು: ನಗರಸಭೆ ಚುನಾವಣೆ ಗುರುವಾರ ಶಾಂತಿಯುತವಾಗಿ ಮುಗಿಯುತ್ತಿದ್ದಂತೆ ಎಲ್ಲ ಮತಯಂತ್ರಗಳನ್ನು ಸರ್ಕಾರಿ ಕಾಲೇಜಿಗೆ ಸಾಗಿಸುವಾಗ ಇತ್ತ ವಾರ್ಡ್ 7ರಲ್ಲಿ ಜೆಡಿಎಸ್ ಯುವ ಮುಖಂಡ ವೀರೇಶ ಹಟ್ಟಿ ಮತ್ತು ಬೆಂಬಲಿಗರು ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕಕುಮಾರ ಎಂಬವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ.
ಜೆಡಿಎಸ್ ಕಾರ್ಯಕರ್ತರ ವಿರುದ್ಧ ಮತದಾನಕ್ಕೆ ಸಂಬಂಧಿಸಿದ ಸಣ್ಣ ವಿಷಯಕ್ಕೆ ರಾದ್ಧಾಂತ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಕುಮಾರ ಮತದಾನದ ನಂತರ ಜೆಡಿಎಸ್ ಮುಖಂಡ ವೀರೇಶ ಹಟ್ಟಿ ಅವರನ್ನು ನೋಡಿಕೊಳ್ಳುವುದಾಗಿ ಶಾಸಕ ನಾಡಗೌಡರ ಸಮಕ್ಷಮದಲ್ಲೇ ಧಮಕಿ ಹಾಕಿದ್ದಾರೆ. ಇದರಿಂದ ಕೆರಳಿದ ಜೆಡಿಎಸ್ ಕಾರ್ಯಕರ್ತರು ಸಂಜೆ 5.15ರ ಸುಮಾರಿಗೆ ವೀರೇಶ ಹಟ್ಟಿ ನೇತೃತ್ವದಲ್ಲಿ ಅಶೋಕ ಕುಮಾರ ಮನೆಗೆ ನುಗ್ಗಿ ದಾಂಧಲೆ ನಡೆಸಿ ಹಲ್ಲೆ ಮಾಡಿದರು. ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಿಎಸ್‌ಐ ವಿರುದ್ಧ ಆರೋಪ: ಇದಕ್ಕೆ ಪ್ರತಿಯಾಗಿ ರಾತ್ರಿ 8.30ರ ಸುಮಾರಿಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರ ಪೊಲೀಸ್ ಠಾಣೆಗೆ ತೆರಳಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಮನೆ ಮುಂದೆ ದಾಂಧಲೆ ನಡೆಸಿ ಹಲ್ಲೆ ಮಾಡುವಾಗ ನಗರ ಠಾಣೆ ಪಿಎಸ್‌ಐ ಲಿಂಗಪ್ಪ ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ದಾಳಿ ಮಾಡಿ ಜೆಡಿಎಸ್ ಕಾರ್ಯಕರ್ತರನ್ನು ರಕ್ಷಿಸಿದರು. ಇವರು ಶಾಸಕ ವೆಂಕಟರಾವ್ ನಾಡಗೌಡರ ಪರವಾಗಿ ಕೆಲಸ ಮಾಡಿದರು. ಇದರಿಂದಾಗಿ ಘಟನೆ ವಿಕೋಪಕ್ಕೆ ಹೋಗಲು ಕಾರಣವಾಗಿದೆ ಎಂದು ಎಸ್ಪಿ ಬಿಸನಳ್ಳಿ ಅವರಿಗೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಾಫರ್ ಜಾಗೀರದಾರ ದೂರು ಸಲ್ಲಿಸಿದರು.
ದೂರು, ಪ್ರತಿ ದೂರು: ಅದರಂತೆ ಹಲ್ಲೆಗೊಳಗಾದ ಅಮೃತಲಾಲ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ವೀರೇಶ ಹಟ್ಟಿ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಶಾಸಕ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಅಮೃತಲಾಲ್ ಹಾಗೂ ಇತರರ ವಿರುದ್ಧ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ನೂರಾರು ಜೆಡಿಎಸ್ ಕಾರ್ಯಕರ್ತರು ಹೋಗುವುದಾಗಿ ಜೆಡಿಎಸ್ ತಾಲೂಕಾಧ್ಯಕ್ಷ ಎಂ. ಲಿಂಗಪ್ಪ ತಿಳಿಸಿದ್ದಾರೆ.
ನಗರದಲ್ಲಿ ಶಾಂತಿಯಿಂದ ಎಲ್ಲ ವಾರ್ಡಗಳಲ್ಲಿ ಚುನಾವಣೆ ಮುಗಿಯಿತು ಎಂದು ಎಲ್ಲ ರಾಜಕೀಯ ಪಕ್ಷಗಳು ನಿಟ್ಟುಸಿರು ಬಿಡುತ್ತಿದ್ದಂತೆ ವಾರ್ಡ್ ನಂ.7ರ ಘಟನೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಜಿದ್ದಾಜಿದ್ದಿಗೆ ವೇದಿಕೆಯಾಗಿದ್ದು, ಸಿಂಧನೂರು ತಾಲೂಕಿನ ರಕ್ತಸಿಕ್ತ ಚುನಾವಣಾ ಇತಿಹಾಸವನ್ನು ಪುನಃ ಮೆಲುಕು ಹಾಕುವಂತೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement