ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೇವದುರ್ಗ ಪುರಸಭೆ: ಶೇ.71.17 ಮತ ಚಲಾವಣೆ

Lingaraj Badiger
Updated On : 8 Mar 2013, 10:59 am

ದೇವದುರ್ಗ: ಸ್ಥಳೀಯ ಪುರಸಭೆಯ 22 ವಾರ್ಡುಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.71.17 ರಷ್ಟು ಮತದಾನವಾದ ಬಗ್ಗೆ ವರದಿಯಾಗಿದ್ದು, ಒಟ್ಟಾರೆ ಮತದಾನ ಶಾಂತಿಯುತವಾಗಿ ಕೊನೆಗೊಂಡಿದೆ.
ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಮತದಾನ ಚುರುಕಾಗಿ ಸಾಗಿತ್ತು. ಮತಗಟ್ಟೆಗಳ ಮುಂದೆ ಸಾಲಾಗಿ ನಿಂತ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಕೆಲ ವಾರ್ಡುಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಗುರುತಿನ ಚೀಟಿಯ ಅಲಭ್ಯತೆಯಿಂದಾಗಿ ಗೊಂದಲ ಏರ್ಪಟ್ಟು ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು.
ಒಂದು ವಾರ್ಡಿನಿಂದ ಇನ್ನೊಂದು ವಾರ್ಡಿಗೆ ಹೆಸರುಗಳು ಬದಲಾಗಿದ್ದರಿಂದ ಮತದಾರರು ತಮ್ಮ ಹೆಸರು ಹುಡುಕಿ ಅಲೆದಾಡುವಂತಾಯಿತು. ಬಹುತೇಕ ವಾರ್ಡ್‌ಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರ ಮಧ್ಯೆ ವಾಗ್ವಾದ, ತಳ್ಳಾಟ ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ನಡೆಯದೇ ಚುನಾವಣೆ ಶಾಂತಿಯುತವಾಗಿ ನಡೆಯಿತು.
ಮಾನವಿ: ಶೇ.64.08 ಮತದಾನ
ರಾಯಚೂರು: ಮಾನವಿ ಪುರಸಭೆಯ 22 ವಾರ್ಡುಗಳಿಗೆ ಗುರುವಾರ ನಡೆದ ಮತದಾನದಲ್ಲಿ ಶೇ.64.08ರಷ್ಟು ಮತದಾನವಾಗಿದೆ.
ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಮತಗಟ್ಟೆಗಳ ಎದುರು ಎಲ್ಲ ವಾರ್ಡುಗಳಲ್ಲಿ ಮತದಾರರು ಸಾಲಾಗಿ ನಿಂತು ತಮ್ಮ ತಮ್ಮ ಚಲಾಯಿಸಿದರು. ಪ್ರತಿ ವಾರ್ಡ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ದೃಶ್ಯ ಕಂಡುಬಂದಿತು.
ಆರಂಭದಲ್ಲಿ ನಿಧಾನವಾಗಿ ಆರಂಭಗೊಂಡ ಮತದಾನವು ನಂತರದಲ್ಲಿ ವೇಗ ಪಡೆಯಿತು. ಮಧ್ಯಾಹ್ನದ 2ರ ಹೊತ್ತಿಗೆ ಶೇ. 45ರಷ್ಟು ಮತದಾನವಾಗಿತ್ತು. ಮತದಾನದ ವೇಳೆ ಮತದಾರರನ್ನು ಅಭ್ಯರ್ಥಿಗಳ ಕಡೆಯವರು ವಾಹನಗಳಲ್ಲಿ ಮತಗಟ್ಟೆಗೆ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಭ್ಯರ್ಥಿಗಳು ಕೊನೆಯ ಪ್ರಯತ್ನವಾಗಿ ಮತದಾರರಿಗೆ ಮತ ಹಾಕಲು ಮನವಿ ಮಾಡುತ್ತಿದ್ದರು.
ಬಂದೋಬಸ್ತ್: ಮಾನವಿಯ ಪುರಸಭೆಯ 22 ವಾರ್ಡುಗಳಿಗೆ ಗುರುವಾರ ನಡೆದ ಮತದಾನದ ವೇಳೆ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಒಟ್ಟಾರೆಯಾಗಿ ಶಾಂತಿಯುತವಾಗಿ ಪೂರ್ಣಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement