ಮತದಾರರ ಪಟ್ಟಿ ಗೊಂದಲ: ಅಸಮಾಧಾನ
ರಾಯಚೂರು: ಸ್ಥಳೀಯ ನಗರಸಭೆಯ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿರುವುದಕ್ಕೆ ಶಾಸಕ ಸೈಯದ್ ಯಾಸೀನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತದಾನಕ್ಕೆ ತೆರಳಿದವರಿಗೆ ಅವರ ಹೆಸರು ನಾಪತ್ತೆಯಾಗಿರುವುದು ಆಘಾತ ತಂದಿದೆ. ಮತದಾರರ ಬಳಿ ಗುರುತಿನ ಚೀಟಿಯಿದ್ದರೂ ಅಂಥ ಮತದಾರರ ಹೆಸರು ಪಟ್ಟಿಯಿಂದ ತೆಗೆದುಹಾಕಿರುವುದಕ್ಕೆ ಆಧಾರವೇನು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳಿಗೆ ನೀಡಿರುವ ಮತದಾರರ ಪಟ್ಟಿ ಹಾಗೂ ಅಧಿಕಾರಿಗಳಿಗೆ ಜಿಲ್ಲಾಡಳಿತ ಒದಗಿಸಿದ ಮತದಾರರ ಪಟ್ಟಿಗೂ ತಾಳೆಯಾಗದಿರುವುದರ ಹಿಂದಿನ ಉದ್ದೇಶವೇನು ಎಂದು ಆಕ್ಷೇಪಿಸಿದರು.
ಮತದಾರರು ಜೀವಂತವಾಗಿದ್ದರೂ ಅಂಥವರ ಹೆಸರು ಮತದಾರರ ಯಾದಿಯಿಂದ ಕೈಬಿಟ್ಟಿರುವುದು ಗಂಭೀರ ವಿಚಾರವಾಗಿದ್ದು, ಕೂಡಲೇ ಜಿಲ್ಲಾಡಳಿತ ಸಂಬಂಧಿಸಿದ ಎಲ್ಲ ಮತಗಟ್ಟೆಗಳ ಮತದಾನಾಧಿಕಾರಿಗಳಿಂದ ವರದಿ ಪಡೆದು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.