ಸಿಂಧನೂರಿನಲ್ಲಿ ಶೇ.61.22ರಷ್ಟು ಮತದಾನ
ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.7
ಸಿಂಧನೂರು ನಗರಸಭೆ ಚುನಾವಣೆ ಗುರುವಾರ ಶಾಂತ ರೀತಿಯಿಂದ ನಡೆಯಿತು. ಕೆಲ ವಾರ್ಡ್ಗಳಲ್ಲಿ ಮಾತಿನ ಚಕಮಕಿ, ವಾಗ್ವಾದ, ಜೆಡಿಎಸ್ ಕಾರ್ಯಕರ್ತರಿಂದ ಸಣ್ಣ ಪುಟ್ಟ ಮಾತಿನ ಘರ್ಷನೆ ನಡೆದು ಹಲ್ಲೆ ಮಾಡುವ ಹಂತಕ್ಕೂ ಹೋದ ಘಟನೆಗಳು ನಡೆದಿವೆ. ಸಂಜೆ 6.30ರ ಮಾಹಿತಿಯ ಪ್ರಕಾರ ಶೇ.61.22ರಷ್ಟು ಮತದಾನವಾಗಿದೆ ಎಂದು ಚುನಾವಣಾ ಇಲಾಖೆ ಮೂಲಗಳು ದೃಢಪಡಿಸಿವೆ.
ಒಟ್ಟು 31 ವಾರ್ಡ್ಗಳಲ್ಲಿ 68 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಮಹಿಬೂಬ ಕಾಲೋನಿ, ಜನತಾ ಕಾಲೋನಿ, ಇಂದಿರಾನಗರ, ಸುಕಾಲಪೇಟೆ, ಕೋಟೆ ಏರಿಯಾಗಳಲ್ಲಿ ಮಧ್ಯಾಹ್ನ 12 ಗಂಟೆವರೆಗೆ ಚುರುಕಾಗಿ ಮತದಾನ ನಡೆಯಿತು. ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ಸಾಲಾಗಿ ನಿಂತು ಮತದಾರರು ಮತ ಚಲಾಯಿಸಿದರು. ಎಲ್ಲಾ ವಾರ್ಡ್ಗಳಲ್ಲಿ ಆಯಾ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾನ ಕೇಂದ್ರದಿಂದ 200 ಮೀಟರ್ ದೂರದಲ್ಲಿ ಹಾಕಿದ್ದ ಸುಣ್ಣದ ಗೆರೆಯ ಬಳಿ ಮತದಾನಕ್ಕೆ ಆಗಮಿಸುತ್ತಿದ್ದ ಮತದಾರರಿಗೆ ಸನ್ನೆ ಮಾಡಿ ಮತ ಹಾಕುವಂತೆ ಪುಸಲಾಯಿಸುವುದು ಕಂಡು ಬಂತು.
ವಾಗ್ವಾದ: ಬಹುತೇಕ ವಾರ್ಡ್ಗಳ ಮತಗಟ್ಟೆಗಳಲ್ಲಿ ಮತದಾರರ ಹೆಸರು ನಾಪತ್ತೆಯಾಗಿತ್ತು. ವಾಸವಿದ್ದ ಮತದಾರರ ಮತಗಳು ಬೇರೆ ವಾರ್ಡ್ಗಳ ಮತದಾರರ ಯಾದಿಯಲ್ಲಿ ಸೇರ್ಪಡೆಯಾಗಿರುವುದನ್ನು ವಿರೋಧಿಸಿ ಅಭ್ಯರ್ಥಿಗಳು ಮತಗಟ್ಟೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಪ್ರಸಂಗಗಳು ಜರುಗಿದವು.
ಒಂದು ಮೂಲದ ಪ್ರಕಾರ ಸುಮಾರು 5 ಸಾವಿರಕ್ಕೂ ಅಧಿಕ ಮತದಾರರು ಈ ಬಾರಿ ಮತದಾನದಿಂದ ವಂಚಿತರಾಗಿದ್ದಾರೆ. ಇದಕ್ಕೆ ಚುನಾವಣಾ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ ಎಂದು ಬಿಎಸ್ಆರ್ ಪಕ್ಷದ ಮುಖಂಡ ಕೆ. ಕರಿಯಪ್ಪ, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್ ಆರೋಪಿಸಿದರು.
ಮತದಾರರ ಯಾದಿಯಲ್ಲದ ಲೋಪದೋಷಗಳ ಕುರಿತಂತೆ ವಾರ್ಡ್ 1ರಲ್ಲಿ ಬಿಎಸ್ಆರ್ ಕಾರ್ಯಕರ್ತರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಸನ್ನೆ ಭಾಷೆ: ವಾರ್ಡ್ ನಂ.17ರಲ್ಲಿ ಕೆಜೆಪಿ ಅಭ್ಯರ್ಥಿ ಮತದಾನ ಕೇಂದ್ರಕ್ಕೆ ಬರುವ ಮತದಾರರಿಗೆ ತೆಂಗಿನಕಾಯಿ ಚಿಹ್ನೆಯನ್ನು ಸನ್ನೆ ಮಾಡಿ ತೋರಿಸುತ್ತಿದ್ದುದ್ದನ್ನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಆಕ್ಷೇಪಿಸಿದರು. ಪರಿಣಾಮ ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ವಾರ್ಡ್ 3, 5ರಲ್ಲಿ ಬಿಎಸ್ಆರ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸುಕಾಲಪೇಟೆ ವಾರ್ಡ್ ನಂ. 27ರಲ್ಲಿ ನಕಲಿ ಮತದಾನ ನಡೆಯುತ್ತಿರುವುದನ್ನು ಬಿಎಸ್ಆರ್ ಮುಖಂಡ ಕೆ. ರಾಜಶೇಖರ ಪ್ರತಿಭಟಿಸಿದರು. ಆಗ ಎರಡೂ ಪಕ್ಷಗಳ ಮಧ್ಯೆ ಘರ್ಷಣೆ ನಡೆಯುವ ಹಂತಕ್ಕೆ ತಲುಪಿತ್ತು.
ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹಲ್ಲೆ: ವಾರ್ಡ್ ನಂ. 7ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮೃತಲಾಲ್, ಜೆಡಿಎಸ್ ಯುವ ಮುಖಂಡ ವೀರೇಶ ಹಟ್ಟಿ ಅವರಿಗೆ ಸಂಜೆ 5 ಗಂಟೆ ನಂತರ ನೋಡಿಕೊಳ್ಳುವುದಾಗಿ ಶಾಸಕ ವೆಂಕಟರಾವ್ ನಾಡಗೌಡರ ಎದುರೇ ಧಮಕಿ ಹಾಕಿದ್ದರಿಂದ ಸಂಜೆ 5.15ರ ಸುಮಾರಿಗೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿದರು. ಸಕಾಲಕ್ಕೆ ಬಳಗಾನೂರು ಪಿಎಸ್ಐ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿದ್ದರಿಂದ ಆಗುವ ಅನಾಹುತ ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮತ ಚಲಾವಣೆ: ವಾರ್ಡ್ 27ರಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಬಿಎಸ್ಆರ್ ಪಕ್ಷದ ಮುಖಂಡ ಕೆ. ಕರಿಯಪ್ಪ, 24ರಲ್ಲಿ ಮಾಜಿ ಶಾಸಕ ಹಂಪನಗೌಡ ಬಾದಲರ್, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, 20ನೇ ವಾರ್ಡ್ನಲ್ಲಿ ಜಿಪಂ ಸದಸ್ಯ ಚಂದೂಸಾಬ ಮುಳ್ಳೂರು, 30ನೇ ವಾರ್ಡ್ನಲ್ಲಿ ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, 23ನೇ ವಾರ್ಡ್ನಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ, 16ನೇ ವಾರ್ಡ್ನಲ್ಲಿ ಬಿಜೆಪಿಯ ಮಧ್ವರಾಜ ಮತ ಚಲಾಯಿಸಿದರು.
ಸಂಜೆ 6 ಗಂಟೆಗೆ ಎಲ್ಲಾ ಮತಗಟ್ಟೆಗಳ ಮತಯಂತ್ರಗಳನ್ನು ಪೊಲೀಸ್ ಸುಪರ್ದಿಯಲ್ಲಿ ಸರ್ಕಾರಿ ಮಹಾವಿದ್ಯಾಲಯಕ್ಕೆ ಸಾಗಿಸಲಾಯಿತು. ಎಲ್ಲಾ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.