ಹೆಸರು ನಾಪತ್ತೆ: ಜೆಡಿಎಸ್ ಆಕ್ರೋಶ
ರಾಯಚೂರು: ಸ್ಥಳೀಯ ನಗರಸಭೆಯ ಚುನಾವಣೆಯಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಮತದಾರರಿಗೆ ನಿರಾಸೆಯಾಗಿದೆ. ಮತದಾರರ ಪಟ್ಟಿಯಿಂದ ವಿನಾಕಾರಣ ಮತದಾರರ ಹೆಸರು ತೆಗೆದು ಹಾಕಿದ್ದು ಸರಿಯಲ್ಲ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ತೀವ್ರ ಬೇಸರ ವ್ಯಕ್ತಪಡಿಸಿದರು.
ಶಾಸಕ ವಜ್ಜಲ್ ಮತದಾನ
ಲಿಂಗಸ್ಗೂರು: ಶಾಸಕ ಮಾನಪ್ಪ ವಜ್ಜಲ್ ತಮ್ಮ ಪತ್ನಿ ಅಮರಮ್ಮ ಅವರ ಜೊತೆ ಆಗಮಿಸಿ ಮತದಾನ ಹಕ್ಕು ಚಲಾಯಿಸಿದರು. ಪಟ್ಟಣದ ವಾರ್ಡ್ 7ರಲ್ಲಿ ಬರುವ ಜ್ಞಾನ ಸಂಜೀವಿನಿ ಖಾಸಗಿ ಶಾಲೆಯ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ದಂಪತಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂತಾರಾಷ್ಟ್ರೀಯ
ಮಹಿಳಾ ದಿನಾಚರಣೆ
ಗುಲ್ಬರ್ಗ: ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವರ್ಲ್ಡ್ ವಿಷನ್ ಇಂಡಿಯಾ ಸಹಯೋಗದಲ್ಲಿ ಜಿಲ್ಲಾ ಭವನದಲ್ಲಿ ಮಾ. 8ರಂದು ಬೆ.10.30ಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುವುದು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಅಕುರಾತಿ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಕೆ. ಪಠಾಣ ಆಗಮಿಸುವರು. ಅರಣ್ಯ ಉಪ ಸಂರಕ್ಷಣಾಧಿಕಾರಿ ರಾಧಾದೇವಿ ಮುಖ್ಯ ಅತಿಥಿಗಳಾಗಿ, ಎಚ್ಕೆಡಿಬಿ ಜಂಟಿ ನಿರ್ದೇಶಕ ಪ್ರವೀಣಪ್ರಿಯ, ಜಿಲ್ಲಾ ಖಜಾನೆ ಅಧಿಕಾರಿ ಅನಸೂಯ, ಆಯುಷ್ ಅಧಿಕಾರಿ ಡಾ. ಭಾರತಿ ಹಾಗೂ ಅರ್ಚನಾ ಮಾಡ್ಯಾಳಕರ್ ಆಗಮಿಸಲಿದ್ದಾರೆ. ಮಹಿಳಾ,ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರತ್ನಾ ಬಿ. ಕಲಂದಾನಿ ಅಧ್ಯಕ್ಷತೆ ವಹಿಸುವರು. ಗ್ಲೋಬಲ್ ಅವಾರ್ಡ್ ಪುರಸ್ಕೃತ ಶಾರದಾ ಯಾಕಾಪುರ, ನ್ಯಾಷನಲ್ ವರ್ಚುವಲ್ ಅಕಾಡೆಮಿ ಪುರಸ್ಕೃತ ವಿಜಯಲಕ್ಷ್ಮಿಯವರಿಗೆ ಸನ್ಮಾನಿಸಲಾಗುವುದು.
ನಿತ್ಯಾನಂದನ ವರ್ತನೆಗೆ ಕನ್ನಡ ಚಳವಳಿ ಖಂಡನೆ
ಸಿಂಧನೂರು: ಬೆಂಗಳೂರಿನ ಬಿಡದಿ ಸ್ವಾಮಿ, ರಾಸಲೀಲೆಯ ಪ್ರವೀಣ ನಿತ್ಯಾನಂದ ಸ್ವಾಮಿ ಇದೀಗ ಬಾಗಲಕೋಟೆ ಜಿಲ್ಲೆಯ ಮುಧೋಳ ಮಠಕ್ಕೆ ಉತ್ತರಾಧಿಕಾರಿಯಾಗಲು ಹೊರಟಿರುವುದು ನಾಡು, ನುಡಿ, ಸಂಸ್ಕೃತಿಗೆ ಕಳಂಕವೆಸಗಿರುವ ನಿತ್ಯಾನಂದ ಸ್ವಾಮಿಯಂತಹವರನ್ನು ಯಾವುದೇ ಕಾರಣಕ್ಕೂ ಉತ್ತರಾಧಿಯಾಗಲು ಅವಕಾಶ ನೀಡಬಾರದೆಂದು ಇಂತಹ ಅವೈಜ್ಞಾನಿಕ ನೀತಿಯನ್ನು ಅಖಿಲ ಕರ್ನಾಟಕ ಕನ್ನಡ ಚಳವಳಿ ತೀವ್ರವಾಗಿ ಖಂಡಿಸಿರುವುದಾಗಿ ರಾಜ್ಯ ಸಂಚಾಲಕ ಕೆ. ಬಾಳಪ್ಪ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಧರ್ಮದ ಹೆಸರಲ್ಲಿ ವಿದ್ರೋಹಕ ಚಟುವಟಿಕೆ ನಡೆಸುವ ಇಂತಹ ಸ್ವಾಮಿಗಳಿಂದ ಯುವಕರು ದಾರಿತಪ್ಪುವ ಸಂಭವನೀಯವೆಂದು ಜಿಲ್ಲಾ ಉಪಾಧ್ಯಕ್ಷ ರಡ್ಡೆಪ್ಪ ತೂಗೇಮನಿ, ಅವಿನಾಶ ದೇಶಪಾಂಡೆ, ಕಾಟಿಬೇಸ್ ಅಧ್ಯಕ್ಷ ಹಸನ್ ಟೇಲರ್, ವೆಂಕಟೇಶ ಕಟ್ಟಿಮನಿ ಆಗ್ರಹಿಸಿದ್ದಾರೆ.