ಉತ್ತಮ ನಾಗರಿಕನಿಗೆ ಸಂಸ್ಕಾರ ಅಗತ್ಯ
ಲಿಂಗಸ್ಗೂರು: ಸಮಾಜದಲ್ಲಿ ಪರಸ್ಪರ ಸೌಹಾರ್ದಯುತ ಹಾಗೂ ಉತ್ತಮ ನಾಗರಿಕರಾಗಿ ಬಾಳಲು ಕಾನೂನಿಗಿಂತ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಆರ್.ವೈ. ಶಶಿಧರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ವೇದಗಳ ಕಾಲದಿಂದ ಮಹಿಳೆಯರಿಗೆ ಉನ್ನತ ಸ್ಥಾನಮಾನ ಕಲ್ಪಿಸಿದ್ದು, ಆದರೆ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರ ನಡೆಯುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಕೃಷಿ ಪ್ರಧಾನ ರಾಷ್ಟ್ರದಲ್ಲಿ ಬಹುತೇಕ ಮಹಿಳೆಯರು ವ್ಯವಸಾಯ ರಂಗದಲ್ಲಿ ತೊಡಗಿದ್ದು, ಪಾಲನೆ, ಪೋಷಣೆ ಮಾಡುವ ಮಹಿಳೆಯರಿಲ್ಲದೆ ಪುರುಷರಿಗೆ ಜೀವನವಿಲ್ಲವೆಂಬ ಅರಿವು ನಮ್ಮಲ್ಲಿ ಮೂಡಬೇಕಿದೆ.
ಸಮಾಜದಲ್ಲಿ ಅನಾಗರಿಕತೆಯಿಂದ ಹೀನಕೃತ್ಯಗಳು ಜರುಗುತ್ತಿದ್ದು, ಮಹಿಳಾ ದೌರ್ಜನ್ಯ, ಅತ್ಯಾಚಾರ ತಡೆಗೆ ಅನೇಕ ಕಠಿಣ ಕಾನೂನುಗಳು ರಚನೆಯಾಗುತ್ತಿವೆ. ಆದರೆ ಯಾವುದೆ ಕಾನೂನು ಜಾರಿಗೆ ಬಂದರೂ ಕೂಡ ಉತ್ತಮ ನಾಗರಿಕರಾಗಿ ಬದುಕು ಸಾಗಿಸಲು ವಿದ್ಯಾರ್ಥಿ, ಯುವಕರಿಗೆ ಪಾಲಕರು ಹಾಗೂ ಶಿಕ್ಷಕ ವರ್ಗ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವುದು ಅಗತ್ಯ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಜೆಎಂಎಫ್ಸಿ ಕಿರಿಯ ಶ್ರೇಣಿ ನ್ಯಾಯಾಧೀಶ ಬಿ.ಜಿ.ದಿನೇಶ, ಸಹಾಯಕ ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಬಳಬಟ್ಟಿ, ಸಿಪಿಐ ಪಂಚಾಕ್ಷರಯ್ಯ, ಕಾಲೇಜು ಪ್ರಾಚಾರ್ಯ ಸಿ.ಜೆ. ಕೂಡ್ಲಿ, ನ್ಯಾಯವಾದಿಗಳಾದ ಹನುಮಂತಪ್ಪ ಸರ್ಜಾಪುರ, ಮುದುಕಪ್ಪ ನೀರಲಕೇರಿ, ರುದ್ರಪ್ಪ ಯಲಿಗಾರ, ಕುಪ್ಪಣ್ಣ ಮಾಣಿಕ್ ಸೇರಿದಂತೆ ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾಥಿಗಳು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.