ಕಾಮಗಾರಿ ಕಳಪೆ; ಬಿಲ್ ತಡೆಗೆ ಕರವೇ ಆಗ್ರಹ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.9
ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಎಸ್ಸಿ, ಎಸ್ಟಿ(ಹರಿಜನ, ಗಿರಿಜನ) ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಕಳೆಪೆಯಿಂದ ಕೂಡಿವೆ. ಕೂಡಲೇ ಈ ಕಾಮಗಾರಿಗಳ ಬಿಲ್ ತಡೆ ಹಿಡಿಯಬೇಕೆಂದು ಆಗ್ರಹಿಸಿ ಶುಕ್ರವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೋಡಲಬಂಡಾ ಕೆಬಿಜೆಎನ್ಎಲ್(ಕೃಷ್ಣಾ ಭಾಗ್ಯ ಜಲ ನಿಗಮ ಲಿ.) ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಕಾಮಗಾರಿ ಅಪೂರ್ಣ: ಜಾಲಹಳ್ಳಿಯಲ್ಲಿ ಕಳೆದ 2011-12 ನೇ ಸಾಲಿನ ಕೆಬಿಜೆಎನ್ಎಲ್ ಇಲಾಖೆಯಿಂದ ಸುಮಾರು ರು. 15 ಕೋಟಿ ವೆಚ್ಚದ ವಿವಿಧ ಕಾಮಗಾರಿ ಕೈಗೊಳ್ಳಲಾಗಿದ್ದು, ಇದರಲ್ಲಿ ಸುಮಾರು 22 ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ ಮತ್ತು ಕೆಲ ಕಾಮಗಾರಿಗಳು ಅಪೂರ್ಣಗೊಂಡಿವೆ. ಗುತ್ತಿಗೆದಾರರು ಸರ್ಕಾರದ ನಿಯಮಗಳನ್ನು ಪಾಲಿಸದೆ ಅಕ್ರಮವೆಸಗಿದ್ದಾರೆ. ಕಾಮಗಾರಿಗೆ ಬಳಸಿದ ಸಿಮೆಂಟ್, ಮರಳು, ಕಂಕರ್, ಕಬ್ಬಿಣದ ಕಂಬಿಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ಮನಸ್ಸಿಗೆ ಬಂದಂತೆ ಕೆಲಸ ನಿರ್ವಹಿಸಿದ್ದಾರೆಂದು ದೂರಿದರು.
ಎಚ್ಚರಿಕೆ: ಈ ಕುರಿತು ವೇದಿಕೆ ಕಾರ್ಯಕರ್ತರು ಕಾಮಗಾರಿ ಕಳಪೆ ಬಗ್ಗೆ ಕಳೆದ ನಾಲ್ಕು ತಿಂಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೂಡಲೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿ ಬಿಲ್ ತಡೆ ಹಿಡಿಯಬೇಕು. ಇಲ್ಲದಿದ್ದರೆ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ ಮನವಿಯನ್ನು ಕೆಬಿಜೆಎನ್ಎಲ್ ಎಂಜಿನಿಯರ್ಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವದುರ್ಗ ಕರವೇ ಅಧ್ಯಕ್ಷ ವೆಂಕಟೇಶ, ಲಿಂಗಸ್ಗೂರು ಅಧ್ಯಕ್ಷ ಜಿಲಾನಿ ಪಾಶಾ, ನಗರ ಘಟಕದ ಮಲ್ಲಿಕಾರ್ಜುನ ಪತ್ತಾರ, ಪ್ರದಾನ ಕಾರ್ಯದಶಿಂ ಶಿವರಾಜ ನಾಯಕ, ನಂದಪ್ಪ, ಆಂಜನೇಯ ಭಂಡಾರಿ, ಅಜೀಜ್ ಪಾಶಾ, ಬಸವರಾಜ ಗೋಪಳಾಪೂರ, ಭೀಮನಗೌಡ ಇನ್ನಿತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.