'ಪಿಎಸ್ಐ ಮೇಲೆ ಆರೋಪ ಸರಿಯಲ್ಲ'
ಸಿಂಧನೂರು: ನಗರ ಪೊಲೀಸ್ ಠಾಣೆಯ ಪಿಎಸ್ಐ ಲಿಂಗಪ್ಪ ಅವರು ಚುನಾವಣಾ ಪೂರ್ವ ದಿನಗಳಂದು ಮತ್ತು ಚುನಾವಣಾ ದಿನದಂದು ಶಿಸ್ತು, ಶಾಂತಿ, ಸುವ್ಯವಸ್ಥೆ ಕಾಪಾಡಲು ಅವಿರತವಾಗಿ ಪ್ರಯತ್ನಿಸಿದ್ದಾರೆ. ಅಂತವರ ಮೇಲೆ ಆರೋಪ ಮಾಡಿರುವ 4ನೇ ವಾರ್ಡ್ನ ಅಭ್ಯರ್ಥಿ ಜಾಫರ್ ಜಾಗೀರದಾರ ಅವರ ಧೋರಣೆ ಸರಿಯಲ್ಲ ಎಂದು 19ನೇ ವಾರ್ಡ್ ಅಭ್ಯರ್ಥಿ ಕೆಜೆಪಿ ಮುಖಂಡ ಎಂ.ಡಿ. ನದೀಮ್ಮುಲ್ಲಾ ಟೀಕಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 19ನೇ ವಾರ್ಡ್ ಸೇರಿದಂತೆ 1,8,6,24 ಮತ್ತು 7ನೇ ವಾರ್ಡ್ಗಳಲ್ಲಿ ಸಂಭವಿಸಬಹುದಾದ ದುರ್ಘಟನೆಗಳನ್ನು ತಪ್ಪಿಸಿದ ಕೀರ್ತಿ ಲಿಂಗಪ್ಪ ಅವರಿಗೆ ಸಲ್ಲುತ್ತದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿದ್ದಾರೆ. ಚುನಾವಣಾ ಪೂರ್ವದಿನದಂದು ಶ್ರೀಮಂತ ಅಭ್ಯರ್ಥಿಗಳು ಹಣ ಹಂಚುತ್ತಿರುವಾಗ ಧಾವಿಸಿ ಬಂದು ಅಂತಹ ಕಾರ್ಯಕರ್ತರನ್ನು ಚದುರಿಸುವ ಮೂಲಕ ಮತದಾರರಿಗೆ ಆಗುವ ಕಿರಿಕಿರಿ ತಪ್ಪಿಸಿದ್ದಾರೆ. ಚುನಾವಣೆಯಂದು ಮತದಾರರಿಗೆ ಭೀತಿ ಹುಟ್ಟಿಸುವ ಚಟುವಟಿಕೆಯಲ್ಲಿ ತೊಡಗಿದ್ದ ಕೆಲವರಿಗೆ ಎಚ್ಚರಿಕೆ ನೀಡಿ ವಾರ್ಡ್ನಿಂದ ಹೊರಗೆ ಹಾಕಿದ ಕಾರ್ಯವೂ ಶ್ಲಾಘನಿಯ. ಚುನಾವಣಾ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಶಾಂತಿಯುತ ಮತದಾನಕ್ಕಾಗಿ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ನದೀಮ್ಮುಲ್ಲಾ ವಿವರಿಸಿದ್ದಾರೆ.
'ಆನೆಕಾಲು ರೋಗ ನಿಯಂತ್ರಿಸಿ'
ಮುದಗಲ್: ಶನಿವಾರದಿಂದ ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಆನೆಕಾಲು ರೋಗ ಮಾತ್ರೆಗಳ (ಡಿಇಸಿ) ಸೇವನೆ ಕಾರ್ಯಕ್ರಮವಿರುವದರಿಂದ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ 30780 ಜನರು ಸೇವಿಸಬೇಕೆಂದು ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಂದ್ರಕುಮಾರ ಮನಗೂಳಿ ತಿಳಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ 33457 ಜನಸಂಖ್ಯೆ ಹೊಂದಿದೆ. ಡಿಇಸಿ ಮಾತ್ರೆ ಸೇವನೆಗೆ 30780 ಜನರು ಅರ್ಹರಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗಾಗಿ 142 ತಂಡ ರಚಿಸಿದೆ. 14 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 2 ವರ್ಷದ ಕೆಳಗಿನ ಮಕ್ಕಳಿಗೆ ಮಾತ್ರೆಗಳನ್ನು ವಿತರಣೆ ಮಾಡಲಾಗುವುದಿಲ್ಲ. ಪಟ್ಟಣದಲ್ಲಿ ಮೇಗಳಪೇಟೆ, ಕುಂಬಾರ ಓಣಿ ಮತ್ತು ವೆಂಕಟರಾಯನಪೇಟೆ ಕೆಲ ಪ್ರದೇಶದಲ್ಲಿ ತಪಾಸಣೆಗೊಳಪಡಿಸಲಾಗಿದೆ. 2008ರಿಂದ ಇಲ್ಲಿವರೆಗೆ 5 ವರ್ಷಗಳಲ್ಲಿ 51 ಪ್ರಕರಣಗಳು ಪತ್ತೆಯಾಗಿವೆ. ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಶೇ. 85 ರಷ್ಟು ಜನ ಮಾತ್ರೆಗಳನ್ನು ವರ್ಷಕ್ಕೆ ಒಂದು ಬಾರಿ 14 ವರ್ಷ ಸೇವನೆ ಮಾಡಿದಲ್ಲಿ ರೋಗಮುಕ್ತ ಪ್ರದೇಶವನ್ನಾಗಿ ಮಾಡಬಹುದಾಗಿದೆ. ಆನೆಕಾಲು ರೋಗ, ಚೇರು ಇಳಿಯುವಿಕೆ, ವೃಷಣಗಳ ಬಾವು ಬಂದು ಆರ್ಕಾಟಿಸ್ನಿಂದ ಪುರುಷನಲ್ಲಿ ಸಂತಾನೋತ್ಪತ್ತಿ ಕ್ರಿಯೆ ಮಂದಗತಿ ಸೇರಿದಂತೆ ರೋಗಗಳನ್ನು ಎದುರಿಸಬೇಕಾಗುತ್ತದೆ ಮಾಹಿತಿ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.