ವೈಚಾರಿಕತೆ ಬೆಳೆಸುವುದೇ ಶರಣ ಸಾಹಿತ್ಯದ ಉದ್ದೇಶ: ಕುರಕುಂದಿ
ಕನ್ನಡಪ್ರಭ ವಾರ್ತೆ, ಸಿಂಧನೂರು ಮಾ.9
ಸಮಾಜದಲ್ಲಿ ಮೌಢ್ಯತೆ ನಿವಾರಿಸಿ ವೈಚಾರಿಕತೆ ಬೆಳೆಸುವುದೇ ಶರಣ ಸಾಹಿತ್ಯದ ಪ್ರಮುಖ ಉದ್ದೇಶ ಎಂದು ಬಸವ ಕೇಂದ್ರದ ಹಿರಿಯ ಅನುಭಾವಿ ಪಿ.ವೀರಭದ್ರಪ್ಪ ಕುರಕುಂದಿ ಹೇಳಿದರು.
ಅವರು ನಗರದ ಸಂಕೇತ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಿ. ಬಸಪ್ಪ ನಾಗಪ್ಪ ತುಕ್ಕಾಯಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ವಿಷಯ ಕುರಿತು ಮಾತನಾಡಿದರು.
ವಚನ ಜಾಗೃತಿ: ಒಂದು ಕಾಲಕ್ಕೆ ಸಾಹಿತ್ಯ (ಸಂಸ್ಕೃತ ಬಲ್ಲ) ಮೇಲ್ವರ್ಗದ ಸ್ವತ್ತಾಗಿತ್ತು. ವಚನ ಸಾಹಿತ್ಯದಿಂದ ಕನ್ನಡ ಭಾಷೆಯ ಬಳಕೆ ಹೆಚ್ಚಾಯಿತು. ಎಲ್ಲ ವರ್ಗದ ಜನರೂ ವಚನಗಳನ್ನು ಬರೆಯಲಾರಂಭಿಸಿದರು. ಕುರುಬ ಗೊಲ್ಲಾಳೇಶ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಮಾದಾರ ಧೂಲಯ್ಯ, ಕಸ ಬಳಿಯುವ ಸತ್ಯಕ್ಕ, ಹೆಂಡದ ಮಾರಯ್ಯ ಹೀಗೆ ವಿವಿಧ ಕಸುಬುಗಳನ್ನು ಮಾಡುವ ಜನರೆಲ್ಲ ತಮ್ಮ ಅನುಭವನ್ನು ವಚನಗಳ ಮೂಲಕ ಹೊರ ಹಾಕಿ ಸಮುದಾಯದ ಜನರನ್ನು ಜಾಗೃತಿಗೊಳಿಸಿದರೆಂದು ತಿಳಿಸಿದರು.
ದತ್ತಿ ದಾನಿಗಳಾದ ಬೆಂಗಳೂರಿನ ಉಚ್ಛ ನ್ಯಾಯಾಲಯದ ನ್ಯಾಯವಾದಿ ನಾಗಪ್ಪ ತುಕ್ಕಾಯಿ ಮಾತನಾಡಿ, ಶರಣ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿ ಸಮಾಜಕ್ಕೆ ಒಳ್ಳೆಯ ಬೆಳಕು ನೀಡಿದೆ ಎಂದರು. ಹೊಸ ದತ್ತಿ: ಇದೇ ಸಂದರ್ಭದಲ್ಲಿ ಅವರು ತಮ್ಮ ತಾಯಿ ದಿ. ಪಾರ್ವತಮ್ಮ ಬಸಪ್ಪ ತುಕ್ಕಾಯಿ ಸ್ಮರಣಾರ್ಥ ಕಾನೂನು ಮತ್ತು ನ್ಯಾಯದಾನ ವಿಷಯದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ದತ್ತಿ ನೀಡುವುದಾಗಿ ಹೇಳಿದರು.
ಸಂಕೇತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ದತ್ತಿಯ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.
ಸಿಂಧನೂರು ತಾಲೂಕು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಂಕೇತ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಕಾಶ ಎಸ್.ಎಚ್., ಇಂದಿರಾ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಚಂಪಕ್ಕ, ಹಿರಿಯ ಸಾಹಿತಿ ಎಚ್.ಜಿ. ಹಂಪಣ್ಣ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಕೌದಿ ಉಪಸ್ಥಿತರಿದ್ದರು. ಸ್ವಾತಿ ಪ್ರಾರ್ಥಿಸಿದರು. ಉಪನ್ಯಾಸಕ ವಿರೂಪಣ್ಣ ಸ್ವಾಗತಿಸಿದರು. ಉಪನ್ಯಾಸಕ ವಿನಯ ಕುಮಾರ ವಂದಿಸಿದರು. ಗೌರವ ಕಾರ್ಯದರ್ಶಿ ವೀರೇಶ ಗೋನವಾರ ಕಾರ್ಯಕ್ರಮ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.