ಅತಂತ್ರ ರಾಯ'ಭಾರ'
ರಾಯಚೂರು: ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಾಯಚೂರು ನಗರಸಭೆ, ಲಿಂಗಸ್ಗೂರು ಪುರಸಭೆ, ಮಾನವಿ ಪುರಸಭೆ, ಮುದಗಲ್ ಪಪಂಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಂಧನೂರು ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ದೇವದುರ್ಗ ಪುರಸಭೆಯಲ್ಲಿ ಬಿಜೆಪಿ ನಿಚ್ಚಳ ಗೆಲವು ಸಾಧಿಸಿವೆ.
ನಗರದ ಸೇರಿದಂತೆ ಜಿಲ್ಲಾದ್ಯಂತದ ಎರಡು ನಗರಸಭೆ, ಮೂರು ಪುರಸಭೆ ಮತ್ತು ಒಂದು ಪಟ್ಟಣ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ನಡೆದು ಅಂತಿಮವಾಗಿ ಸಿಂಧನೂರು ಮತ್ತು ದೇವದುರ್ಗದಲ್ಲಿ ಮಾತ್ರ ನಿಚ್ಚಳ ಫಲಿತಾಂಶ ಬಂದಿದೆ.
ರಾಯಚೂರು ನಗರಸಭೆ: ರಾಯಚೂರು ನಗರಸಭೆ 35 ವಾರ್ಡುಗಳಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತಕ್ಕೆ ಅವಶ್ಯಕವಾಗಿದ್ದ 18 ಸ್ಥಾನಗಳಲ್ಲಿ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ 14 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಜೆಡಿಎಸ್-9, ಬಿಜೆಪಿ-7, ಪಕ್ಷೇತರರು ಐದು ಸ್ಥಾನಗಳಲ್ಲಿ ಗೆಲವು ಸಾಧಿಸುವ ಮೂಲಕ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. 2007ರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್-11, ಬಿಜೆಪಿ-6 ಹಾಗೂ ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರು.
ಸಿಂಧನೂರು ನಗರಸಭೆ: ಸಿಂಧನೂರು ನಗರಸಭೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತಕ್ಕೆ ಅಗತ್ಯವಿರುವ 16ಕ್ಕೂ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಅಧಿಕಾರದ ಹಿಡಿದಿದೆ. ಒಟ್ಟು 31 ವಾರ್ಡುಗಳ ಪೈಕಿ ಕಾಂಗ್ರೆಸ್ 18 ವಾರ್ಡುಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆಯಿತು. ಜೆಡಿಎಸ್-4, ಕೆಜೆಪಿ-4, ಬಿಎಸ್ಸಾರ್ ಕಾಂಗ್ರೆಸ್-5 ಕಡೆ ಗೆಲುವು ಸಾಧಿಸಿವೆ. 2007ರ ಚುನಾವಣೆಯಲ್ಲಿ ಸಿಂಧನೂರು ನಗರಸಭೆಯಲ್ಲಿ ಜೆಡಿಎಸ್-15, ಕಾಂಗ್ರೆಸ್-14 ಮತ್ತು ಬಿಜೆಪಿ-2 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದವು.
ಲಿಂಗಸ್ಗೂರು ಪುರಸಭೆ: ಲಿಂಗಸ್ಗೂರು ಪುರಸಭೆ ಪರಿಸ್ಥಿತಿ ಅತಂತ್ರಕ್ಕೆ ಸಿಲುಕಿದೆ. ಒಟ್ಟು 23 ವಾರ್ಡುಗಳ ಪೈಕಿ ಒಂದು ವಾರ್ಡಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ. 22 ವಾರ್ಡುಗಳಿಗೆ ಚುನಾವಣೆ ನಡೆದಿತ್ತು. ಬಹುಮತಕ್ಕೆ 12 ಸ್ಥಾನದ ಗೆಲುವು ಅವಶ್ಯಕ. ಆದರೆ ಕಾಂಗ್ರೆಸ್-11, ಜೆಡಿಎಸ್-8, ಕೆಜೆಪಿ-1, ಬಿಎಸ್ಸಾರ್ ಕಾಂಗ್ರೆಸ್-1, ಪಕ್ಷೇತರ-1 ಸ್ಥಾನದಲ್ಲಿ ಗೆದ್ದಿದ್ದಾರೆ. ಆದರೆ ಬಿಜೆಪಿ ಎಲ್ಲ ಸ್ಥಾನಗಳಲ್ಲಿ ಸೋಲುಂಡು ಭಾರೀ ಮುಖಭಂಗ ಅನುಭವಿಸಿದೆ.
2007ರ ಚುನಾವಣೆಯಲ್ಲಿ ಲಿಂಗಸ್ಗೂರು ಪುರಸಭೆಯಲ್ಲಿ ಜೆಡಿಎಸ್-13, ಕಾಂಗ್ರೆಸ್ 10ರಲ್ಲಿ ಆಯ್ಕೆಯಾಗಿದ್ದವು. ಆಗ ಜೆಡಿಎಸ್ ನ ಎಲ್ಲ 13 ಜನ ಸದಸ್ಯರು ಕಾಂಗ್ರೆಸ್ ನಂತರದಲ್ಲಿ ಸೇರ್ಪಡೆಗೊಂಡಿದ್ದರು.
ದೇವದುರ್ಗ ಪುರಸಭೆ: ದೇವದುರ್ಗ ಪುರಸಭೆಯಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಅವರ ಪ್ರಭಾವ ಮತ್ತೊಮ್ಮೆ ಕೆಲಸ ಮಾಡಿದೆ. ಅವರು ಬಿಜೆಪಿಯಲ್ಲಿಯೇ ಮುಂದುವರಿಯಲಿದ್ದಾರೆಯೇ ಇಲ್ಲವೇ ಎಂಬ ಗೊಂದಲದ ಮಧ್ಯೆಯೂ ಅಲ್ಲಿ ಬಿಜೆಪಿಗೆ ಗೆಲವು ತಂದುಕೊಟ್ಟಿದ್ದಾರೆ. ದೇವದುರ್ಗ ಪುರಸಭೆಯ ಒಟ್ಟು 23 ವಾರ್ಡುಗಳಲ್ಲಿ ಒಂದು ವಾರ್ಡಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ. 22 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-17, ಕಾಂಗ್ರೆಸ್-5 ಮತ್ತು ಜೆಡಿಎಸ್-1 ಸ್ಥಾನದಲ್ಲಿ ಗೆಲವು ಕಂಡು ಅಧಿಕಾರಿ ಹಿಡಿದಿದೆ. 2007ರ ಚುನಾವಣೆಯಲ್ಲಿ ದೇವದುರ್ಗ ಪುರಸಭೆಯಲ್ಲಿ ಕಾಂಗ್ರೆಸ್-13, ಜೆಡಿಎಸ್-8 ಮತ್ತು ಪಕ್ಷೇತರ-2 ಆಯ್ಕೆಯಾಗಿದ್ದರು.
ಮಾನವಿ ಪುರಸಭೆ: ಮಾನವಿ ಪುರಸಭೆಯ ಒಟ್ಟು 23 ವಾರ್ಡುಗಳ ಪೈಕಿ ಒಂದು ವಾರ್ಡಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ 22 ವಾರ್ಡುಗಳಿಗೆ ಚುನಾವಣೆ ನಡೆದಿತ್ತು. ನಿಚ್ಚಳ ಬಹುಮತಕ್ಕೆ ಅವಶ್ಯಕವಾಗಿದ್ದ 12 ಸ್ಥಾನಗಳಲ್ಲಿ ಗೆಲವು ಯಾರಿಗೂ ದಕ್ಕಿಲ್ಲ. ಕಾಂಗ್ರೆಸ್- 8, ಬಿಜೆಪಿ-4, ಜೆಡಿಎಸ್-3, ಬಿಎಸ್ಸಾರ್-2, ಕೆಜೆಪಿ-1, ಪಕ್ಷೇತರ-5 ರಲ್ಲಿ ಗೆಲುವು ಸಾಧಿಸಿದ್ದು ಪುರಸಭೆ ಅತಂತ್ರ ಪರಿಸ್ಥಿತಿಗೆ ಸಿಲುಕಿದೆ.
2007ರ ಚುನಾವಣೆಯಲ್ಲಿ ಕಾಂಗ್ರೆಸ್-16, ಜೆಡಿಎಸ್-6, ಬಿಜೆಪಿ-1 ಸ್ಥಾನದಲ್ಲಿ ಗೆಲವು ಸಾಧಿಸಿದ್ದವು.
ಮುದಗಲ್ ಪಟ್ಟಣ ಪಂಚಾಯಿತಿ: ಮುದಗಲ್ ಪಟ್ಟಣ ಪಂಚಾಯಿತಿಯಲ್ಲಿಯೂ ಯಾವುದೇ ಪಕ್ಷ ನಿಚ್ಚಳ ಬಹುಮತ ಪಡೆಯುವಲ್ಲಿ ವಿಫಲವಾಗಿವೆ. ಒಟ್ಟು 19 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕಾಗಿ 10ಸ್ಥಾನಗಳಲ್ಲಿ ಗೆಲುವಿನ ಅವಶ್ಯಕತೆಯಿದ್ದು, ಜೆಡಿಎಸ್-9, ಕಾಂಗ್ರೆಸ್-7, ಬಿಎಸ್ಸಾರ್-2, ಪಕ್ಷೇತರ-1 ಸ್ಥಾನದಲ್ಲಿ ಗೆದ್ದಿದ್ದಾರೆ. ಆ ಮೂಲಕ ನಿಚ್ಚಳ ಬಹುಮತಕ್ಕೆ ಅವಶ್ಯಕ ಒಂದು ಸ್ಥಾನಕ್ಕೆ ಮೇಲಾಟಕ್ಕೆ ದಾರಿಯಾಗಿದೆ.
2007ರ ಚುನಾವಣೆಯಲ್ಲಿ ಕಾಂಗ್ರೆಸ್ 4, ಜೆಡಿಎಸ್ 14, ಬಿಜೆಪಿ 1 ಸ್ಥಾನದಲ್ಲಿ ಗೆದ್ದಿದ್ದವು. ಈ ಬಾರಿ ಮುದಗಲ್ ಪಪಂಯಲ್ಲಿ ಬಿಜೆಪಿ ಧೂಳಿಪಟವಾಗಿದೆ. ಒಂದೂ ಸ್ಥಾನವನ್ನು ಗೆಲ್ಲಲು ಕೂಡ ವಿಫಲವಾಗಿದೆ.