630 ಬಸ್ ಮಿತಿಗಿಂತ ಹೆಚ್ಚು ಬಳಕೆ
ರಾಯಚೂರು: ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ 630ಕ್ಕೂ ಹೆಚ್ಚಿನ ಬಸ್ಗಳು 7.50 ಲಕ್ಷ ಕಿಮೀ ಕ್ರಮಿಸುವ ಮೂಲಕ ಬಳಕೆಗೆ ನಿಗದಿತ ಮಿತಿ ಮೀರಿವೆ. ಅಂಥ ಬಸ್ಗಳನ್ನು ಬಳಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೆಯೇ ಅತ್ಯಾಧುನಿಕ ಮಾದರಿಯ ಬಸ್ಗಳನ್ನು ಸಂಸ್ಥೆಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕಲ್ಲೂರು ತಿಳಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳೆಯ ಬಸ್ಗಳ ಸ್ಥಾನದಲ್ಲಿ ಹೊಸದಾಗಿ ಎಲ್ಲ 7 ಜಿಲ್ಲೆಗಳ ವ್ಯಾಪ್ತಿಯ ಡಿಪೋಗಳಿಗೆ ಹೊಸದಾಗಿ ಬಸ್ಗಳನ್ನು ಒದಗಿಸಲಾಗುತ್ತಿದೆ. ನಗರ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಗಮನ ನೀಡಿದ್ದು, ಈಗಾಗಲೇ ಬಿಜಾಪುರ ಮತ್ತು ಗುಲ್ಬರ್ಗ ನಗರಗಳಲ್ಲಿ ತಲಾ 40 ನಗರ ಸಾರಿಗೆಗೆ ಅತ್ಯಾಧುನಿಕ ಮಾದರಿಯ ಬಸ್ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಅಗತ್ಯ ಕ್ರಮ: ರಾಯಚೂರು ನಗರದಲ್ಲಿ ಬಸ್ಗಳು ಮುಕ್ತವಾಗಿ ಸಂಚರಿಸಲು ಕಿರಿದಾದ ರಸ್ತೆಗಳಿಂದಾಗಿ ಅಡಚಣೆಯಾಗಿದೆ. ಆದರೂ ಸಾರಿಗೆ ಸಂಸ್ಥೆಯು ತಿಂಗಳಾಂತ್ಯಕ್ಕೆ 20 ಹೊಸ ಮಾದರಿಯ ಬಸ್ಗಳನ್ನು ಒದಗಿಸಿ ನಗರ ಸಾರಿಗೆ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಆಹ್ವಾನ: ರಾಯಚೂರು ಮತ್ತು ಸಿಂಧನೂರು ನಗರಗಳ ಕೇಂದ್ರ ಬಸ್ ನಿಲ್ದಾಣ ಕಾಮಗಾರಿಯ ಬಗ್ಗೆ ಪರಿಶೀಲಿಸಿದ್ದು, ಮಾ.25ರೊಳಗೆ ರಾಯಚೂರು ನಗರದ ಬಸ್ನಿಲ್ದಾಣದ ಉದ್ಘಾಟನೆಗೆ ದಿನಾಂಕ ನಿಗದಿಯಾಗಲಿದೆ. ಗೃಹ ಸಚಿವ ಆರ್.ಅಶೋಕ ಅವರಿಗೆ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದರು.
ಸಿಂಧನೂರು ನಗರ ಬಸ್ ನಿಲ್ದಾಣದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈಶಾನ್ಯ ಸಾರಿಗೆ ಸಂಸ್ಥೆಯು ವಾಯವ್ಯ ಸಾರಿಗೆಗೆ ಹೋಲಿಸಿದರೆ ಪ್ರಗತಿ ಪಥದಲ್ಲಿದ್ದು, ಹೆಚ್ಚಿನ ಆದಾಯವನ್ನೂ ಗಳಿಸುತ್ತಿದೆ. ನಷ್ಟದ ಪ್ರಮಾಣ ಇಳಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಂಧ್ರದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಶ್ರೀಶೈಲಂ ಮತ್ತು ಮಂತ್ರಾಲಯಗಳಿಗೆ ತೆರಳುವ ಸಾರಿಗೆ ಸಂಸ್ಥೆಯ ನೂರಾರು ಬಸ್ಗಳಿಗೆ ನಿಲುಗಡೆಗೆ ಸ್ಥಳದ ಕೊರತೆ ಎದುರಾಗಿದೆ. ಇದರಿಂದ ರಾಜ್ಯದಿಂದ ತೆರಳುವ ಭಕ್ತರನ್ನು ಆಯಾ ದೇವಸ್ಥಾನಗಳಿಂದ ದೂರದಲ್ಲಿಯೇ ಇಳಿಸುವಂತಾಗಿದೆ.
ಸ್ಥಳಕ್ಕೆ ಮನವಿ: ಹಾಗೆಯೇ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಈ ಸ್ಥಳಗಳಲ್ಲಿ ವಿಶ್ರಾಂತಿಗೆ ಸೂಕ್ತ ಸ್ಥಳವಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಶ್ರೀಶೈಲಂ ಮತ್ತು ಮಂತ್ರಾಲಯಗಳಿಗೆ ತೆರಳಿ ಅಲ್ಲಿನ ದೇವಾಲಯದ ಪ್ರಮುಖರ ಜತೆ ಚರ್ಚಿಸಿ ಸ್ಥಳ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಶ್ರೀಶೈಲಂ ಮತ್ತು ಮಂತ್ರಾಲಯದಲ್ಲಿ ಸ್ಥಳ ದೊರೆತಲ್ಲಿ ಪ್ರತ್ಯೇಕ ಬಸ್ನಿಲ್ದಾಣ ಮತ್ತು ಚಾಲಕ, ನಿರ್ವಾಹಕ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗುತ್ತದೆಂದರು.
ರಾಯಚೂರು ಜಿಲ್ಲೆಯ 883 ಗ್ರಾಮಗಳ ಪೈಕಿ ಈಗಲೂ ಅನೇಕ ಗ್ರಾಮಗಳಿಗೆ ಹದಗೆಟ್ಟಿರುವ ರಸ್ತೆಗಳ ಕಾರಣಕ್ಕೆ ಬಸ್ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಮತ್ತೆ ಕೆಲವೆಡೆ ಬಸ್ ಸಂಚಾರಕ್ಕೆ ಅವಕಾಶವಿಲ್ಲದಂಥ ರಸ್ತೆಯಿರುವುದು ಸಮಸ್ಯೆಗೆ ಕಾರಣ. ರಸ್ತೆಗಳ ದುಸ್ಥಿತಿಯ ಬಗ್ಗೆ ಶೀಘ್ರದಲ್ಲಿಯೇ ಜಿಪಂ ಮತ್ತು ತಾಪಂ ಹಾಗೂ ಗ್ರಾಪಂ ಆಡಳಿತಗಳಿಗೆ ಪತ್ರ ಬರೆದು ರಸ್ತೆ ಸುಧಾರಿಸುವಂತೆ ಮನವಿ ಮಾಡಲಾಗುತ್ತದೆ.
ತಮ್ಮ ಗಮನಕ್ಕೆ: ಸಾರಿಗೆ ಸಂಸ್ಥೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯನಿರ್ವಹಣೆಯ ಹೊರೆ ಬೀಳುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅದರಿಂದ ಅಪಘಾತಗಳ ಪ್ರಮಾಣದಲ್ಲಿಯೂ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲಕ ಮತ್ತು ನಿರ್ವಾಹಕರು ಹಾಗೂ ವಿವಿಧ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದ್ದು, ನೇಮಕಾತಿ ಪೂರ್ಣಗೊಂಡ ನಂತರದಲ್ಲಿ ಈ ಒತ್ತಡ ಕಡಿಮೆಯಾಗಲಿದೆ ಎಂದರು.
ಡಿಪೋಗೆ ಸಿದ್ಧ: ಮಸ್ಕಿ ಮತ್ತು ಸಿರವಾರ ಪಟ್ಟಣಗಳನ್ನು ಈಚೆಗೆ ಸರ್ಕಾರ ತಾಲೂಕು ಕೇಂದ್ರವಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯು ಸಿರವಾರದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಆಸಕ್ತಿ ವಹಿಸಿದ್ದು, ಸ್ಥಳೀಯರು ಜಾಗೆ ನೀಡಲು ಮುಂದಾದರೆ ಅಲ್ಲಿ ಬಸ್ ಡಿಪೋ ನಿರ್ಮಿಸಲು ಸಂಸ್ಥೆ ಸಿದ್ಧವಿದೆ.
ಈಗಾಗಲೇ ಮಸ್ಕಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಘಟಕವಿದ್ದು, ಅದನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳು ಹಾಗೂ ಬಸ್ ಘಟಕಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಅಗತ್ಯ ಕ್ರಮ ಹಾಗೂ ಮುಂದಿನ ದಿನಗಳಲ್ಲಿ ರಾಯಚೂರು ನಗರದಲ್ಲಿ ನಗರ ಸಾರಿಗೆ ಸೌಲಭ್ಯ ಸುಧಾರಣೆಗೆ ಮೊದಲ ಹಂತದಲ್ಲಿ 20 ಬಸ್ ಗಳು ಹಾಗೂ ಆನಂತರದಲ್ಲಿ ಹೆಚ್ಚುವರಿ 20 ಬಸ್ಗಳನ್ನೂ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಾ.ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ದೇವರಾಜ ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಗಸ್ತಿ, ಎಪಿಎಂಸಿ ಅಧ್ಯಕ್ಷ ಆರ್.ತಿಮ್ಮಯ್ಯ, ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ವರ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.