ಆಂತರಿಕ ಕಚ್ಚಾಟ, ಬಣ ರಾಜಕೀಯವೇ 'ಕೈ'ಗೆ ಹಿನ್ನಡೆ
ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷ 19 ಸ್ಥಾನಗಳಲ್ಲಿ ಕೇವಲ 7 ಸ್ಥಾನಗಳನ್ನು ಗಳಿಸುವ ಮೂಲಕ ಸಂಖ್ಯಾಬಲ ಕುಗ್ಗಿಸಿಕೊಳ್ಳಲು ಕಾಂಗ್ರೆಸ್ನ ಆಂತರಿಕ ಕಚ್ಚಾಟವೇ ಮೂಲ ಕಾರಣ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ 14 ಜೆಡಿಎಸ್, 4 ಕಾಂಗ್ರೆಸ್, 1 ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರು. ನಂತರ ರಾಜ್ಯದಲ್ಲಿ ಆದ ರಾಜಕೀಯ ಬದಲಾವಣೆಯಿಂದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಮುದಗಲ್ ಪಟ್ಟಣ ಪಂಚಾಯ್ತಿ ಬೆಂಬಲಿತ 12 ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿಂದ ಕಾಂಗ್ರೆಸ್ ಸಂಖ್ಯಾಬಲ 16ಕ್ಕೆ ಏರಿತ್ತು.
ಬಣ ರಾಜಕೀಯ: ಇಂದಿನ ಕುಷ್ಠಗಿ ಶಾಸಕ ಅಮರೇಗೌಡ ಬಯ್ಯಾಪುರ ಲಿಂಗಸ್ಗೂರು ತಾಲೂಕಿನ ಕಾಂಗ್ರೆಸ್ ಹೈಕಮಾಂಡ್ ಎಂದೇ ಬಿಂಬಿತವಾಗಿದ್ದರು. ಯಾವುದೇ ಕಾರ್ಯಕ್ರಮಗಳು ನಡೆದರೂ, ಅವರ ನೇತೃತ್ವದಲ್ಲೇ ನಡೆಯುತ್ತಿದ್ದವು. ವಿಧಾನಸಭೆ ಕ್ಷೇತ್ರಗಳ ಮರು ವಿಂಗಡಣೆಯಿಂದಾಗಿ ಲಿಂಗಸ್ಗೂರು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಕಾಂಗ್ರೆಸ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಯಿತು. ಗುಂಪುಗಾರಿಕೆ ಆರಂಭವಾಯಿತು. ಲಿಂಗಸ್ಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿಯವರದ್ದು ಒಂದು ಬಣವಾದರೆ, ಶಾಸಕ ಅಮರೇಗೌಡ ಬಯ್ಯಾಪುರ ಅವರದ್ದು ಒಂದು ಬಣವಾಯಿತು.
ಟಿಕೆಟ್ ಹಂಚಿಕೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ 'ಬಿ' ಫಾರಂ ನೀಡುವಲ್ಲಿ ಬಣ ರಾಜಕೀಯದಿಂದಾಗಿ ನಿಷ್ಠಾವಂತರಿಗೆ ನೀಡಲಿಲ್ಲ. ಇದು ಕಾರ್ಯಕರ್ತರಲ್ಲಿ, ಅಭ್ಯರ್ಥಿ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೆಚ್ಚಲು ಕಾರಣವಾಯಿತು. ಅಸಮರ್ಥರಿಗೆ ಟಿಕೆಟ್ ಹಂಚಿಕೆ ಮಾಡಿದ್ದರಿಂದ ಮತ್ತು ಗೊಂದಲದಿಂದಾಗಿ ವಾರ್ಡ್ ನಂ. 7, 9, 10, 12, 14, 18, 19ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದೆ ಎನ್ನುವುದು ಪಕ್ಷದ ಕೆಲವರ ಅಭಿಮತ.
ಹೊಂಚು: ಕಾಂಗ್ರೆಸ್ನಲ್ಲಿನ ಆಂತರಿಕ ಕಚ್ಚಾಟವನ್ನು ಸೂಕ್ಷ್ಮವಾಗಿ ಅರಿತುಕೊಂಡಿದ್ದ ಜೆಡಿಎಸ್ ಮುಖಂಡರು ಕಾಂಗ್ರೆಸ್ ಟಿಕೆಟ್ ವಂಚಿತರಿಗೆ ಗಾಳ ಹಾಕುವ ಮೂಲಕ ಜೆಡಿಎಸ್ ಬಿ ಫಾರಂ ನೀಡಿದ್ದರು. ಅಷ್ಟೇ ಅಲ್ಲದೆ ಬಿಜೆಪಿ ಶಾಸಕರಾಗಿದ್ದರೂ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶಾಸಕ ವಜ್ಜಲ್ ಪ್ರಚಾರ ಮಾಡಿದ್ದರಿಂದ ಜೆಡಿಎಸ್ಗೆ ಕೊಂಚ ಬಲ ಬಂದಂತಾಗಿದೆ. ಕಾಂಗ್ರೆಸ್ನ ಭಿನ್ನಮತದ ಲಾಭ ಪಡೆದಿರುವ ಜೆಡಿಎಸ್ 9 ಸ್ಥಾನಗಳನ್ನು ಪಡೆಯುವ ಮೂಲಕ ಮುಂಚೂಣಿಯಲ್ಲಿದ್ದರು.
ಕಾಂಗ್ರೆಸ್ನ ಭಿನ್ನಮತ ಇದೇ ರೀತಿಯೇ ಮುಂದುರಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಕಾಂಗ್ರೆಸ್ ಈ ರೀತಿ ಬಣ ರಾಜಕಾರಣವನ್ನು ಬಿಟ್ಟು ಎಲ್ಲರನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಪಕ್ಷ ದುಷ್ಪರಿಣಾಮವನ್ನು ಏದುರಿಸಬೇಕಾಗುತ್ತದೆ ಎಂದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಅನಿಸಿಕೆಯಾಗಿದೆ.
ಬಿಎಸ್ಆರ್ ಅಭ್ಯರ್ಥಿಗಳು ಕಿಂಗ್ ಮೇಕರ್
ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಅಧಿಕಾರ ಪಡೆಯಲು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಗಾಳ ಹಾಕಲು ಜೆಡಿಎಸ್, ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ.
ಕಾಂಗ್ರೆಸ್ ಅಧಿಕಾರ ಪಡೆಯಲು ಇನ್ನೂ ಮೂರು ಸ್ಥಾನಗಳ ಅವಶ್ಯಕತೆ ಇದೆ. ಜೆಡಿಎಸ್ಗೆ ಒಂದು ಸ್ಥಾನದ ಕೊರತೆ ಇದೆ. ಮೂರು ಕ್ಷೇತ್ರಗಳಲ್ಲಿ ಖಾತೆ ತೆರೆದಿರುವ ಬಿಎಸ್ಆರ್ ಕಾಂಗ್ರೆಸ್ ಸದಸ್ಯರಿಗೆ ಭಾರಿ ಬೇಡಿಕೆ ಇದೆ. ಕಾಂಗ್ರೆಸ್ಗೆ ಮೂರು ಸದಸ್ಯರು ಬೆಂಬಲ ನೀಡಿದರೂ, ಜೆಡಿಎಸ್ನು ಶಾಸಕ ಮಾನಪ್ಪ ವಜ್ಜಲ್ ಬೆಂಬಲಿಸಿದರೆ, ಎರಡು ಪಕ್ಷಗಳೂ ಸಮಾನ ಬಲ ಪ್ರದರ್ಶನವಾಗಲಿದೆ. ಮತ್ತೆ ಇಲ್ಲಿ ಬಿಎಸ್ಆರ್ ಮುಖಂಡ ಸಂಸದ ಸಣ್ಣ ಫಕೀರಪ್ಪ ಮತ ಚಲಾಯಿಸುವ ಅವಕಾಶ ಇದ್ದು, ಬಿಎಸ್ಆರ್ ಕಾಂಗ್ರೆಸ್ ನಿರ್ಣಾಯಕವಾಗುತ್ತದೆ.
ಇದೇ ಕಾರಣದಿಂದ ರಾಜಕೀಯ ಲೆಕ್ಕಾಚಾರದಲ್ಲಿ ಮುಖಂಡರು ನಿರತರಾಗಿದ್ದಾರೆ. ಮುದಗಲ್ನಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳಿಗೆ ಬಿಎಸ್ಆರ್ ಕಾಂಗ್ರೆಸ್ ಸದಸ್ಯರೇ ನಿರ್ಣಾಯಕರಾಗಿರುವುದು ವಿಶೇಷವಾಗಿದೆ.