ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕನ್ನಡ ಬಗ್ಗೆ ಗೌರವ ಬೆಳೆಸಿಕೊಳ್ಳಲಿ

Lingaraj Badiger
Updated On : 14 Mar 2013, 10:58 am

ರಾಯಚೂರು: ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕನ್ನಡಿಗರು ಮತ್ತು ಕನ್ನಡ ಭಾಷೆಯ ಬಗ್ಗೆ ಗೌರವ ಹೊಂದುವುದು ಅವಶ್ಯಕ. ಕನ್ನಡ ವಿರೋಧಿಗಳಿಗೆ ಕರವೇ ತಕ್ಕ ಪಾಠ ಕಲಿಸುತ್ತದೆ. ಈ ನಿಟ್ಟಿನಲ್ಲಿ ಯುವಕರು ಒಂದಾಗಿ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರಾಮಾಣಿಕರು ಹಾಗೂ ಕನ್ನಡಪರ ಚಿಂತನೆಯುಳ್ಳುವರಿಗೆ ಬೆಂಬಲಿಸುವಂತೆ ಕರವೇ ಸಂಘಟನೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕರೆ ನೀಡಿದರು.
ಕಳಕಳಿಯಿಲ್ಲ: ಅವರು ನಗರದಲ್ಲಿ ಸಂಘಟನೆಯಿಂದ ಆಯೋಜಿಸಿದ್ದ ಸ್ವಾಭಿಮಾನಿ ಕನ್ನಡಿಗರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಇಂದಿನ ರಾಜಕೀಯ ನಾಯಕರಲ್ಲಿ ಕನ್ನಡೆದೆಡೆಗೆ ಕಳಕಳಿಯಿಲ್ಲವಾಗಿದೆ. ಪರಿಣಾಮ ಪರಭಾಷಿಕರಿಂದ ಕನ್ನಡಿಗರಿಗೆ ನಿರಂತರ ತೊಂದರೆ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಹೈ.ಕ.ಭಾಗಕ್ಕೆ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ನೀಡಿರುವುದು ಅದರ ಕರ್ತವ್ಯವಷ್ಟೇ. ಆದರೆ ಕೇಂದ್ರವು ಈ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಇದು ಶಹಾಬ್ಬಾಸ್ಗಿರಿ ಪಡೆಯುವ ಕಾರ್ಯವಲ್ಲ. ಈ ಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಮಣಿದು ಕೇಂದ್ರ ಸಮ್ಮತಿಸಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಹೋರಾಟದ ಎಚ್ಚರಿಕೆ: ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ಬರೆಯುವುದಕ್ಕೆ ಯುಪಿಎಸ್ಸಿಯ ಹೊಸ ನಿಯಮಾವಳಿಗಳು ತೊಡಕಾಗಿವೆ. ಕೂಡಲೇ ಕೇಂದ್ರ ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದಲ್ಲಿ ಸಂಘಟನೆಯು ಹೋರಾಟಕ್ಕಿಳಿಯಲಿದೆ. ಪ್ರಾದೇಶಿಕ ಭಾಷೆಗಳನ್ನು ನಿಯಂತ್ರಿಸಲು ಕೇಂದ್ರ ಈ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಹಿಂದಿ ಭಾಷೆ ನಮ್ಮ ರಾಷ್ಟ್ರ ಭಾಷೆಯಲ್ಲ. ಆದರೆ ಆ ಭಾಷೆಯನ್ನು ಅನಗತ್ಯವಾಗಿ ಹೇರುವ ಕಾರ್ಯ ಮಾಡಲಾಗುತ್ತಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಕೇಂದ್ರ ಅಗೌರವ ತೋರಿದರೆ ಒಕ್ಕೂಟ ವ್ಯವಸ್ಥೆಯಲ್ಲಿ ಮುಂದುವರಿಯುವ ಅವಶ್ಯಕತೆಯಾದರೂ ಏನು? ಎಂಬುದನ್ನು ಅರಿಯಬೇಕಿದೆ ಎಂದು ಎಚ್ಚರಿಸಿದರು.
ಸಮಾವೇಶವನ್ನು ಉದ್ಘಾಟಿಸಿದ ಸಾಹಿತಿ ಪಂಪಯ್ಯ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಇತರೆ ಭಾಷಿಕರ ಕಿರುಕುಳ ತಪ್ಪಿಸಿ ಕನ್ನಡಿಗರ ರಕ್ಷಣೆಯಲ್ಲಿ  ಕರವೇ ಸಂಘಟನೆ ಸಾಕಷ್ಟು ಶ್ರಮಿಸಿದೆ. ಕಳೆದ 8ರಿಂದ 10 ವರ್ಷಗಳಿಂದ ಕರವೇ ಸಂಘಟನೆಯು ನಿರಂತರ ಹೋರಾಟದ ಮೂಲಕ ಜನತೆಗೆ ಸೌಲಭ್ಯಗಳನ್ನು ಒದಗಿಸಿಕೊಡುವ ಕಾರ್ಯ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಎಚ್ಚರಿಸಿ: ಗಡಿ ಭಾಗದಲ್ಲಿ ಕನ್ನಡ ಶಾಲೆಗಳಿಗೆ ಕನ್ನಡ ಭಾಷೆಯ ಪಠ್ಯಪುಸ್ತಕಗಳನ್ನು ಒದಗಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕರವೇ ಸಂಘಟನೆ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಸಬೇಕೆಂದು ಮನವಿ ಮಾಡಿದರು.
ಸಮಾರಂಭದ ಸಾನ್ನಿಧ್ಯವನ್ನು ಕಿಲ್ಲೆಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯರು ವಹಿಸಿದ್ದರು.
ಸಮಾರಂಭದಲ್ಲಿ ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ,ವೀರ ಹನುಮಾನ್, ಪ್ರಸನ್ನಕುಮಾರ್, ಅಶೋಕ ಲೋಧಾ, ಜಿಲ್ಲಾಧ್ಯಕ್ಷ ವಿನೋದರೆಡ್ಡಿ  ಉಪಸ್ಥಿತರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು ಸಮಾರಂಭದಲ್ಲಿದ್ದರು.
ಇದಕ್ಕೂ ಮುನ್ನ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ನಗರದ ಗಂಜ್ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ರಂಗಮಂದಿರಕ್ಕೆ ಕರೆ ತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement