ಯುಪಿಎಸ್ಸಿ ಪರೀಕ್ಷೆ ನಿಯಮಾವಳಿ ಬದಲು
ರಾಯಚೂರು: ಯುಪಿಎಸ್ಸಿ ಪರೀಕ್ಷೆ ನಿಯಮಾವಳಿಗಳಲ್ಲಿ ಬದಲಾವಣೆ ತಂದಿರುವ ಕೇಂದ್ರದ ಕ್ರಮವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೃತ್ಯ. ಆಯಾ ರಾಜ್ಯಗಳಲ್ಲಿರುವ ವಿವಿಧ ಭಾಷಾ ಸಮುದಾಯವನ್ನು ಹತ್ತಿಕ್ಕುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಆರೋಪಿಸಿದರು.
ನಗರದಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಯುಪಿಎಸ್ಸಿ ನಡೆಸುವ ವಿವಿಧ ಐಎಎಸ್ ಮತ್ತಿತರೆ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಕಡ್ಡಾಯಗೊಳಿಸಿರುವುದು ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುವ ತಂತ್ರವಾಗಿದೆ. ಉತ್ತರ ಭಾರತ ಮೂಲದವರ ಕುತಂತ್ರ ಇದಾಗಿದ್ದು, ಆಡಳಿತದಲ್ಲಿ ಆಯಾ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಂಡರೆ ರಾಜ್ಯಗಳ ಮೇಲೆ ತಮ್ಮ ಹಿಡಿತ ತಪ್ಪುತ್ತದೆಂಬ ಹುನ್ನಾರವಿದಾಗಿದೆ ಎಂದು ದೂರಿದರು.
ಸೇಡಿನ ಕ್ರಮ: ಯುಪಿಎಸ್ಸಿ ಕೂಡಲೇ ಈ ಮೊದಲಿನ ನಿಯಮಗಳಂತೆ ತನ್ನ ಪರೀಕ್ಷೆಗಳನ್ನು ಆಯೋಜಿಸಬೇಕು. ಹೊಸ ನಿಯಮಗಳನ್ನು ಕೂಡಲೇ ಕೈಬಿಡಬೇಕು. ತಪ್ಪಿದಲ್ಲಿ ದೆಹಲಿಯ ಯುಪಿಎಸ್ಸಿ ಕಚೇರಿ ಎದುರು ಕರವೇ ಹೋರಾಟ ನಡೆಸಲಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ರೇಲ್ವೆ ಇಲಾಖೆ ಈಗಾಗಲೇ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಆ ಮೂಲಕ ಅನೇಕ ಕನ್ನಡ ಯುವಕರಿಗೆ ರೇಲ್ವೆ ಇಲಾಖೆಯಲ್ಲಿ ನೌಕರಿ ದೊರೆತಿದೆ. ಇಂಥ ಪರಿಸ್ಥಿತಿಯಿರುವಾಗಲೇ ಕೇಂದ್ರ ಸರ್ಕಾರ ದುರುದ್ದೇಶದಿಂದ ಹಾಗೂ ಪ್ರಾದೇಶಿಕ ಭಾಷೆಗಳ ಸಮುದಾಯವನ್ನು ಮಟ್ಟ ಹಾಕಲು ಯುಪಿಎಸ್ಸಿ ನಿಯಮಗಳ ಬದಲಾವಣೆ ಮೂಲಕ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ದಿಢೀರ್ ಬದಲಾವಣೆ: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನ ನಾಯಕರು ಪ್ರಾದೇಶಿಕವಾಗಿ ಬಲಿಷ್ಠಗೊಳ್ಳುತ್ತಿರುವ ವಿವಿಧ ಪ್ರಾದೇಶಿಕ ಪಕ್ಷಗಳನ್ನು ಮಟ್ಟ ಹಾಕಲು ಇಂಥ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ. ಪ್ರಾದೇಶಿಕ ಭಾಷೆಗಳ ಬೆಳವಣಿಗೆ ಸಹಿಸದೇ ಯುಪಿಎಸ್ಸಿ ನಿಯಮಾವಳಿಗಳಲ್ಲಿ ದಿಢೀರ್ ಬದಲಾವಣೆ ತರಲಾಗಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾ.14ರಂದು ಸಮಾನ ಮನಸ್ಕರ ಹಾಗೂ ಕನ್ನಡಪರ ಚಿಂತನೆ ನಡೆಸುವವರ ಪ್ರಮುಖರ ಸಭೆ ಕರೆದಿದ್ದು, ಯುಪಿಎಸ್ಸಿ ಕ್ರಮ ಖಂಡಿಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ರೂಪರೇಷೆಗಳನ್ನು ಸಭೆಯಲ್ಲಿ ಅಂತಿಮ ಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮನವಿ: ಕರವೇ ಸಂಘಟನೆ ಕಳೆದ ಅನೇಕ ವರ್ಷಗಳಿಂದ ಕಾವೇರಿ ನೀರಿನ ವಿಷಯದಲ್ಲಿ ಕೇಂದ್ರದ ಧೋರಣೆ ಖಂಡಿಸುತ್ತಲೇ ಬಂದಿದೆ. ಹೈ ತೀರ್ಪಿನ ಅಧಿಸೂಚನೆ ಹೊರಡಿಸಲು ತೀವ್ರ ವಿರೋಧ ವ್ಯಕ್ತಪಡಿಸಿದೆ. 2007ರಲ್ಲಿ ಆಗಿನ ಪ್ರಧಾನಿಗೆ ಕರವೇ ಸಂಘಟನೆ ಪ್ರತಿಭಟನೆ ನಂತರದಲ್ಲಿ ಮನವಿ ಸಲ್ಲಿಸಿತ್ತು. ಆಗ ಅಧಿಸೂಚನೆ ಹೊರಡಿಸದಿರುವ ಬಗ್ಗೆ ಸಂಘಟನೆಗೆ ಭರವಸೆ ನೀಡಲಾಗಿತ್ತು. ಆದರೆ ಸದ್ಯ ಕೇಂದ್ರ ಸರ್ಕಾರ ತಮ್ಮ ಅಂಗ ಪಕ್ಷವಾದ ಡಿಎಂಕೆ ಪ್ರಭಾವಕ್ಕೊಳಗಾಗಿ ಸರ್ಕಾರವನ್ನು ಉಳಿಸಿಕೊಳ್ಳಲು ಅಧಿಸೂಚನೆ ಜಾರಿಗೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮಾ.23 ಮತ್ತು 24ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾವೇರಿ ಕೊಳ್ಳದ ಪ್ರಮುಖರ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರೂ ಸೇರಿದಂತೆ ಅನೇಕ ಕಾವೇರಿ ಪರ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಎಲ್ಲ ರಾಜಕೀಯ ಪಕ್ಷಗಳನ್ನೂ ಆಹ್ವಾನಿಸಿದ್ದು, ಆ ಮೂಲಕ ರಾಜ್ಯದ ನಿಲುವನ್ನು ಕೇಂದ್ರಕ್ಕೆ ಸ್ಪಷ್ಟಪಡಿಸುವ ಉದ್ದೇಶವಿದೆ ಎಂದರು.