ಕಾಂಗ್ರೆಸ್ ಆಡಳಿತ ಶೀಘ್ರ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.14
ರಾಯಚೂರು ನಗರಸಭೆ ಸೇರಿದಂತೆ ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಅಗತ್ಯ ಬೆಂಬಲ ಪಡೆಯುವ ಪ್ರಯತ್ನ ಜಾರಿಯಲ್ಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳಲ್ಲಿ ದೇವದುರ್ಗ ಹೊರತುಪಡಿಸಿ ಉಳಿದಂತೆ ರಾಯಚೂರು, ಮಾನವಿ, ಲಿಂಗಸ್ಗೂರು, ಮುದಗಲ್ ಮತ್ತು ಸಿಂಧನೂರುಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರಕ್ಕೆ..: ಈಗಾಗಲೇ ಸಿಂಧನೂರು ನಗರಸಭೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿದೆ. ಇನ್ನುಳಿದ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷೇತರರು ಮತ್ತಿತರರ ಬೆಂಬಲದೊಂದಿಗೆ ಅಧಿಕಾರಕ್ಕೇರುವುದಾಗಿ ತಿಳಿಸಿದ ಅವರು, ರಾಯಚೂರು ನಗರಸಭೆಯಲ್ಲಿ ಕಳೆದ ಅವಧಿಗೆ ಕಾಂಗ್ರೆಸ್ ಅಧಿಕಾರವಧಿಯಲ್ಲಿ 27ಕ್ಕೂ ಹೆಚ್ಚು ಸಂಘಟನೆಗಳು ನಗರಾಡಳಿತದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಲೇ ಸಾಗಿದರೂ ಸಾಕಷ್ಟು ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೋಟ್ಯಂತರ ರು. ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಜನತೆ ಸಂಘಟನೆಗಳ ಹೋರಾಟದ ಹೊರತಾಗಿಯೂ ಅಭಿವೃದ್ಧಿ ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ 27 ಸಂಘಟನೆಗಳಿಗೆ ನಗರದ ಮತದಾರರೇ ತಕ್ಕ ಉತ್ತರ ನೀಡಿದ್ದಾರೆಂದು ಅವರು ಹೇಳಿದರು.
ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯು ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಗೆ ದಿಕ್ಸೂಚಿಯಾಗಿದೆ. ಈಗ ಬಂದಿರುವ ಫಲಿತಾಂಶದಿಂದ ಕಾಂಗ್ರೆಸ್ಗೆ ಸ್ಫೂರ್ತಿ ದೊರೆತಿದ್ದು ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ಗೆ ಜನಬೆಂಬಲ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಕೆಲಮಟ್ಟಿಗಿನ ಲೋಪವಾಗಿರುವುದು ನಿಜ ಎಂದು ಒಪ್ಪಿಕೊಂಡ ಅವರು, ಅದರಿಂದಾಗಿ ಗೆಲ್ಲುವಂಥ ಅಭ್ಯರ್ಥಿಗಳಿಗೆ ದೊರೆಯದೇ ಸ್ಪರ್ಧೆಯಿಂದ ದೂರವುಳಿದಿದ್ದು ಸದ್ಯ ಅಗತ್ಯ ಬಹುಮತದಷ್ಟು ಸಂಖ್ಯೆಯ ಸದಸ್ಯರು ಆಯ್ಕೆಯಾಗಲಿಲ್ಲ ಎಂದು ಹೇಳಿದರು.
ಹೈಕಮಾಂಡ್ಗೆ ವರದಿ: ಕಾಂಗ್ರೆಸ್ ಟಿಕೆಟ್ ದೊರೆಯದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದವರ ಬಗ್ಗೆ ಹೈಕಮಾಂಡ್ಗೆ ವರದಿ ಸಲ್ಲಿಸಲಾಗಿದೆ. ಆದರೆ ಈ ಹಂತದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತಮಗೆ ಗೊತ್ತಿಲ್ಲ. ಮುಂಬರುವ ಚುನಾವಣೆಯ ದೃಷ್ಟಿಯಿಂದ ಎಲ್ಲ ನಾಯಕರನ್ನು ಒಗ್ಗೂಡಿಸಿ ಚುನಾವಣೆ ಎದುರಿಸುವುದು ಪಕ್ಷದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ನಗರದಲ್ಲಿ ಹಿರಿಯ ಸದಸ್ಯರಾದ ಶಿವಮೂರ್ತಿ, ಕೆ.ಶಾಂತಪ್ಪ, ದರೂರು ಬಸವರಾಜ ಪಾಟೀಲ್, ಶಶಿರಾಜ್ ಅವರುಗಳು ತಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ ಹಣ ಮತ್ತು ವಿವಿಧ ಆಮಿಷಗಳಿಂದಾಗಿ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ, ಬೂದೆಪ್ಪ, ಬಾಬರ್, ಸುಧಾನ್ ಸೇರಿದಂತೆ ಅನೇಕರಿದ್ದರು.
ನೂತನ ಪದಾಧಿಕಾರಿಗಳು
ರಾಯಚೂರು: ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಆದೇಶ ಹೊರಡಿಸಿದ್ದಾರೆ.
ಕೆಪಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರ ಅನುಮೋದನೆ ಮೇರೆಗೆ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿರುವುದಾಗಿ ತಿಳಿಸಿರುವ ಅವರು, ಪಕ್ಷದ ಉಪಾಧ್ಯಕ್ಷರುಗಳಾಗಿ ಕೆ.ಶರಣಪ್ಪ ಕಲ್ಮಲಾ, ಸೈಯದ್ ಗೌಸ್ ಮೊಹಿನುದ್ದೀನ್ ನವಾಬ್, ಕಾಳಿಂಗಪ್ಪ, ರೂಪಾ ನಿರಂಜನ ಬಾಳೆ, ಹುಸೇನ್ ಪಾಷಾ, ಗೋಪಾಲಕೃಷ್ಣ ನೇಮಕಗೊಂಡಿದ್ದಾರೆಂದು ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಉಮೇಶ್ ಬಳಿಗಾರ್, ಎಂ. ಈರಣ್ಣ, ರಾಜಶೇಖರ್ ನಾಯಕ, ಪದ್ಮಾವತಿ ಹರಿಶ್ಚಂದ್ರ ರೆಡ್ಡಿ ನೇಮಕಗೊಂಡಿದದಾರೆ. ಕಾರ್ಯದರ್ಶಿಗಳಾಗಿ ಕೆ.ಕಿರಿಲಿಂಗಪ್ಪ ಯಮನಪ್ಪ ಮಲ್ಲಾಪುರ, ಕೌಸಲ್ಯ ನಾಗೇಶ್ವರರಾವ್, ಎಲ್.ಟಿ. ಶಕುಂತಲಾ ನಾಯಕ, ದರೂರು ಬಸವರಾಜ್, ಈ.ಶಿವರಾಜ್, ಎಂ.ಕೆ. ಬಾಬರ್, ಕಿಶನ್ ರಾವ್, ಸುಲೋಚನಾ ಕರಿಯಪ್ಪ ಅವರನ್ನು ನೇಮಿಸಲಾಗಿದೆ. ಜಯಣ್ಣ, ಶ್ರೀಶೈಲಪ್ಪ ಬ್ಯಾಳಿ, ಕೆ.ಶಾಂತಪ್ಪ, ಭೂಪನಗೌಡ ಕರಡಕಲ್, ಚನ್ನವೀರಪ್ಪಗೌಡ, ತಾಯಣ್ಣ ನಾಯಕ, ರುದ್ರಪ್ಪ ಅಂಗಡಿ, ಬಷೀರುದ್ದೀನ್, ಶ್ರೀನಿವಾಸರೆಡ್ಡಿ ಸೇರಿದಂತೆ ಒಟ್ಟು 30 ಜನರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.