ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೈಹಿಕ ಶಿಕ್ಷಣದಿಂದ ಮಕ್ಕಳ ಸರ್ವ ಪ್ರಗತಿ

Lingaraj Badiger
Updated On : 15 Mar 2013, 10:43 am

ಕನ್ನಡಪ್ರಭ ವಾರ್ತೆ ರಾಯಚೂರು ಮಾ.14
ಪಠ್ಯದ ಜತೆಗೆ ದೈಹಿಕ ಶಿಕ್ಷಣ ನೀಡಿಕೆ ಮೂಲಕ ಮಕ್ಕಳ ಸರ್ವಾಂಗೀಣ ಏಳಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ಹಾಗೂ ಶಿಕ್ಷಕರ ಪ್ರಗತಿಯ ಸಮಗ್ರ ಚಿಂತನೆ ಅಗತ್ಯವಾಗಿದೆ ಎಂದು ಬೆಂಗಳೂರಿನ ಡಿಎಸ್ಪಿ ವಿರೂಪಾಕ್ಷಿ ಹೇಳಿದರು.
ನಗರದಲ್ಲಿ ಗುರುವಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಎರಡು ದಿನಗಳ ಶಿಕ್ಷಕರ ಬಲವರ್ಧನೆ ಹಾಗೂ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೈಹಿಕ ಶಿಕ್ಷಣ ಬೋಧನೆಯನ್ನು ಪಠ್ಯದ ಜತೆಗೆ ಕಡ್ಡಾಯಗೊಳಿಸಿದ್ದರೂ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಇದರಿಂದ ಮೂಲ ಆಶಯಕ್ಕೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೈಹಿಕ ಶಿಕ್ಷಣ ಅಗತ್ಯ: ಮಗುವಿನ ದೈಹಿಕ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಅಗಾಧವಾದ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಎಲ್ಲರಿಗೆ ಮಾಹಿತಿ ನೀಡುವ ಕಾರ್ಯವಾಗಬೇಕಿದೆ. ಆಗ ಮಾತ್ರ ಎಲ್ಲ ಮಕ್ಕಳಲ್ಲಿ ಈ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲು ಸಾಧ್ಯವಾಗುತ್ತದೆ. ಪಾಲಕರಲ್ಲಿಯೂ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹಿಸುವ ಜಾಗೃತಿ ಮೂಡುತ್ತದೆ ಎಂದು ಹೇಳಿದರು.
ಪಾಲಕರಲ್ಲಿನ ದೈಹಿಕ ಶಿಕ್ಷಣದೆಡೆಗಿನ ಆಸಕ್ತಿ ಕುಂದಿದೆ. ಪೈಪೋಟಿಯ ಈ ದಿನಗಳಲ್ಲಿ ಪಠ್ಯದೆಡೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಮಾರಕವಾಗಿದೆ. ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕೆಂಬ ಬಯಕೆ ಪಾಲಕರಲ್ಲಿ ಹೆಚ್ಚಾಗುತ್ತಿದೆ. ಆದರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವವರ ಸಂಖ್ಯೆ ತೀರಾ ಕಡಿಮೆ ಎಂದು ಆತಂಕ ವ್ಯಕ್ತಪಡಿಸಿದರು.
ಆಧುನಿಕತೆ ಭರಾಟೆ..: ಆಧುನಿಕತೆಯ ಗುಂಗಿನಲ್ಲಿ ಎಲ್ಲರೂ ಮಕ್ಕಳನ್ನು ಯಂತ್ರಗಳಂತೆ ತಯಾರಿಸುತ್ತಿದ್ದು, ದೈಹಿಕ ಬಲವರ್ಧನೆ ಕಡೆಗೆ ಯಾರೂ ಗಮನಹರಿಸುತ್ತಿಲ್ಲ, ಇದು ಶೋಚನೀಯ ಸಂಗತಿಯಾಗಿದೆ ಎಂದರು.
ಬೀದರ್ ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ದೇಶಪ್ಪ ಮಾತನಾಡಿ, ದೈಹಿಕ ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಗೌರವಭಾವನೆ ಬೆಳೆಸಿಕೊಳ್ಳುವುದು ಅವಶ್ಯ. ಮಕ್ಕಳನ್ನು ಶಕ್ತಿಯುತಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಶಿಸ್ತಿನ ಸಿಪಾಯಿಗಳನ್ನಾಗಿ ರೂಪಿಸುವ ಕಾರ್ಯ ಮಾಡುವಂತೆ ಸಲಹೆ ನೀಡಿದರು.
ಯೋಜನೆ ಲಾಭ ಪಡೆಯಿರಿ: ಸ್ಥಳೀಯ ಶಾಸಕ ಸೈಯದ್ ಯಾಸೀನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸಲು ಅನೇಕ ಪ್ರೋತ್ಸಾಹಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆಯಲು ಮನವಿ ಮಾಡಿದರು.
ತಾಲೂಕು ಕ್ಷೇತ್ರ ಶಿಕ್ಷಣಾಕಾರಿ ಜಿ.ಮಲ್ಲಿಕಾರ್ಜುನ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೈ. ಸುರೇಂದ್ರಬಾಬು ಮಾತನಾಡಿದರು. ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ.ವಿ, ಪ್ರಧಾನ ಕಾರ್ಯದರ್ಶಿ ಅಶ್ವತ ನಾರಾಯಣ ಸ್ವಾಮಿ, ಬೆಂಗಳೂರಿನ ರಾಘವನ್, ರಾಜಣ್ಣ, ವಿಲ್ಸನ್ ಆರ್ನಾಲ್ಡ್, ಅಮರೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ, ರಾಜ್ಯ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ತಿಮ್ಮಣ್ಣ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಭಂಡಾರಿಗಲ್ ಸೇರಿದಂತೆ ಅನೇಕರು ಇದ್ದರು.
ಜಿಲ್ಲೆಯ ನಾನಾ ಪ್ರದೇಶಗಳಿಂದ ಆಗಮಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement