ಸದಸ್ಯರಲ್ಲದವರೂ ಸಭೆಗೆ ಹಾಜರು; ಗೊಂದಲ
ರಾಯಚೂರು: ಇಲ್ಲಿನ ಜಿಲ್ಲಾ ಪಂಚಾಯಿತಿ ಕಳೆದ ಅನೇಕ ಸಾಮಾನ್ಯ ಸಭೆಗಳಿಂದ ಗೊಂದಲದ ಗೂಡು. ದಿಕ್ಕು ತಪ್ಪಿದ ಚರ್ಚೆಯಿಂದಾಗಿ ಪರಿಹಾರ ಕಾಣದ ಸಮಸ್ಯೆಗಳು. ಅಧಿಕಾರಿಗಳು ಆಡಿದ್ದೇ ಆಟ ಎಂಬಂಥ ಸ್ಥಿತಿ. ಇದಕ್ಕೆ ಹೊಸ ಸೇರ್ಪಡೆಯಾಗಿ ಜಿಪಂ ಸದಸ್ಯರಲ್ಲದವರೂ ಸಭೆಯಲ್ಲಿ ಅನಾಯಾಸವಾಗಿ ಭಾಗವಹಿಸಿ ಸಭೆಯಲ್ಲಿ ಸಮಸ್ಯೆ ಹೇಳಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಯಿತು.
ನಗರದಲ್ಲಿ ಗುರುವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಇಂಥ ಪ್ರಸಂಗ ನಡೆಯಿತು.
ಸಭೆಯಲ್ಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕವ ಕಾರ್ಯ ಮಾಡುತ್ತಿಲ್ಲ. ಜಿಪಂ ಸದಸ್ಯರನ್ನೂ ಕಡೆಗಣಿಸಲಾಗುತ್ತಿದೆ ಎಂದು ಸದಸ್ಯರು ಆರೋಪ ಮಾಡುತ್ತಿದ್ದ ಸಂದರ್ಭದಲ್ಲಿಯೇ ಸಭಾಂಗಣ ಪ್ರವೇಶಿಸಿದ ಜಿಪಂ ಸದಸ್ಯರಲ್ಲದ ವ್ಯಕ್ತಿಯೊಬ್ಬರು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆಯಿದೆ. ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮಾಹಿತಿ ಹಕ್ಕು ಅಡಿ ಮಾಹಿತಿ ಕೇಳಿದರೂ ಕೊಡುತ್ತಿಲ್ಲ ಎಂದು ದೂರಿದರು.
ಹೊರನಡೆಯಲು ಸೂಚನೆ: ಇದರಿಂದ ಗಲಿಬಿಲಿಗೊಂಡ ಸದಸ್ಯರು ಹಾಗೂ ಅಧಿಕಾರಿಗಳು ಕೆಲಹೊತ್ತು ಸಮಸ್ಯೆ ಆಲಿಸಿ ಆನಂತರದಲ್ಲಿ ಆ ವ್ಯಕ್ತಿಯು ಸದಸ್ಯರೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆ ವ್ಯಕ್ತಿ ತಾನು ಮಾದಿಗ ದಂಡೋರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಸಿಂಗನೋಡಿ ಎಂದು ಹೇಳಿಕೊಂಡು, ಮತ್ತೆ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಹೇಳಲು ಮುಂದಾದಾಗ ತಡೆದ ಜಿಪಂ ಸಿಇಒ ಮತ್ತಿತರರು ಸಭೆಯಲ್ಲಿ ಸದಸ್ಯರಲ್ಲದವರಿಗೆ ಮಾತನಾಡಲು ಅವಕಾಶವಿಲ್ಲ. ಸಭಾಂಗಣದಿಂದ ಹೊರನಡೆಯುವಂತೆ ಸೂಚಿಸಿದರು.
ಈ ನಂತರ ಜಿಪಂ ಸದಸ್ಯರು ಜಿಪಂ ಸಭಾಂಗಣಕ್ಕೆ ಯಾರಾದರೂ ನುಗ್ಗಿದರೆ ತಡೆಯಲು ಸಿಬ್ಬಂದಿಗೇಕೆ ಸಾಧ್ಯವಾಗುತ್ತಿಲ್ಲ. ಸಭೆಯ ಗೌರವ ಕಾಪಾಡುವ ಕಾರ್ಯ ಮಾಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಸದಸ್ಯರಲ್ಲದವರಿಗೂ ಅವಕಾಶ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಟ್ಟುಹಿಡಿದರು. ಆಗಲೂ ಅಧಿಕಾರಿಗಳದ್ದು ದಿವ್ಯ ಮೌನವೇ ಉತ್ತರವಾಗಿತ್ತು.