ಅಸಮರ್ಪಕವಾಗಿ ವಾರಬಂದಿ ನಿರ್ವಹಣೆ: ಅಸಮಾಧಾನ
ಕ.ಪ್ರ. ವಾರ್ತೆ,ಸಿಂಧನೂರು,ಮಾ.15
ತಾಲೂಕಿನ 54ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೆಳಭಾಗದ ರೈತರಿಗೆ ಕುಡಿಯಲು ಸಹ ನೀರು ಬಿಡದೆ ಮಸ್ಕಿ ಉಪ ವಿಭಾಗದ ಸ. ಕಾರ್ಯನಿರ್ವಾಹಕ ಅಭಿಯಂತರ ಕುಮಾರಸ್ವಾಮಿ ತಮಗೆ ಅನ್ಯಾಯ ಮಾಡಿದ್ದಾರೆ ಎಂದು ಕೆಳಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷಗಳಿಂದ ವಾರಬಂದಿ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದು ಕುಮಾರಸ್ವಾಮಿ ಬಂದ ನಂತರ ಮೇಲ್ಭಾಗದ ರೈತರ ಹಿತಕಾಪಾಡುತ್ತಿದ್ದಾರೆ. ಮೇಲ್ಭಾಗದಲ್ಲಿ ಅಕ್ರಮವಾಗಿ ಸುಮಾರು 50 ಪೈಪುಗಳನ್ನು ಹಾಕಿಕೊಳ್ಳಲಾಗಿದೆ. ಅವುಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ರೈತ ಮುಖಂಡರಾದ ಶ್ರೀನಿವಾಸರಾವ್, ಪಾಪಾರಾವ್, ವೀರರಾಜು, ಬೋಸ್, ರಾಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಕೆರೆಗಳು ಖಾಲಿ: ಜವಳಗೇರಾ, ಆರ್.ಎನ್. ನಗರ, ಸಿಂಡಿಕೇಟ್ ಕ್ಯಾಂಪ್, ಸೂರಾರೆಡ್ಡಿ ಕ್ಯಾಂಪ್, ವೆಂಕಟೇಶ ಕ್ಯಾಂಪ್, ಪುನರ್ವಸತಿ ಕ್ಯಾಂಪ್, ಪಾಪಾರಾವ್ ಕ್ಯಾಂಪ್, ರಾಗಲಪರ್ವಿ, ಆಯನೂರು, ಪುಲದಿನ್ನಿ, ಅರಗಿನಮರ, ಆರ್.ಎಚ್. ನಂ.1ರಿಂದ 5 ಕ್ಯಾಂಪ್‌ಗಳು, ಚರ್ಚ್ ಕ್ಯಾಂಪ್ ಮತ್ತಿತರ ಗ್ರಾಮಗಳಿಗೆ ನೀರು ಹರಿಸದಿರುವುದರಿಂದ ಕುಡಿವ ನೀರಿನ ಕೆರೆಗಳನ್ನು ತುಂಬಿಕೊಂಡಿಲ್ಲ. ಮುಂದೆ ಆಗಬಹುದಾದ ಅನಾಹುತಕ್ಕೆ ಕುಮಾರಸ್ವಾಮಿ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.