ಲಂಚ: ಅಧಿಕಾರಿಗೆ 7 ವರ್ಷ ಶಿಕ್ಷೆ
ರಾಯಚೂರು: ಗುತ್ತಿಗೆದಾರರೊಬ್ಬರಿಗೆ ಲೈಸೆನ್ಸ್ ನೀಡಲು ಲಂಚ ಸ್ವೀಕರಿಸಿದ್ದ ಜಿಪಂ ಅಧೀಕ್ಷಕರಿಗೆ ಜಿಲ್ಲಾ ನ್ಯಾಯಾಲಯ 7 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ತೀರ್ಪಿತ್ತಿದೆ. ಮಾನವಿ ತಾಲೂಕಿನ ಬಲ್ಲಟಗಿಯ ಹನುಮಂತ್ರಾಯ ಎಂಬ ಗುತ್ತಿಗೆದಾರರಿಗೆ 4ನೇ ದರ್ಜೆಯ ಗುತ್ತಿಗೆದಾರರ ಲೈಸೆನ್ಸ್ ನೀಡಲು 1 ಸಾವಿರ ಲಂಚ ಕೇಳಿದ್ದ ಜಿಪಂ ಎಂಜಿನಿಯರಿಂಗ್ ವಿಭಾಗದ ಅಧೀಕ್ಷಕ ಅಮರಯ್ಯ ಅವರನ್ನು ಲೋಕಾಯುಕ್ತರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ಮಿಟ್ಟಲಕೋಡ್ ಅವರು ಆರೋಪಿ ಅಮರಯ್ಯಗೆ 7 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿದ್ದಾರೆಂದು ಲೋಕಾಯುಕ್ತ ಕಚೇರಿ ತಿಳಿಸಿದೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಸಿದ್ದಲಿಂಗಪ್ಪ ಬೋರೆಡ್ಡಿ ವಾದ ಮಂಡಿಸಿದ್ದರು.
ಅರ್ಜಿ ಸ್ವೀಕಾರ
ಮಸ್ಕಿ: ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಗ್ರಾಮ ಸಭೆಯಲ್ಲಿ 2012-13ನೇ ಸಾಲಿನ ಇಂದಿರಾ ಆವಾಸ್ ಯೋಜನೆಯ ವಸತಿ ಸೌಲಭ್ಯಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಗ್ರಾಪಂಗೆ ಈ ಯೋಜನೆ ಅಡಿ ಮಂಜೂರಾಗಿರುವ 50 ಮನೆಗಳ ಪೈಕಿ 20 ಮನೆಗಳು ಎಸ್ಸಿಗೆ, 10 ಎಸ್ಟಿಗೆ, 8 ಅಲ್ಪಸಂಖ್ಯಾತರು, 12 ಜನ ಸಾಮಾನ್ಯವರ್ಗದವರಿಗೆ ಹಾಗೂ ಮೂವರು ಅಂಗವಿಕಲರಿಗೆ ವಿಂಗಡಿಸಲಾಗಿದೆ ಎಂದು ಗ್ರಾಪಂ ಅಧಿಕಾರಿಗಳು ಜನತೆಗೆ ವಿವರಿಸಿದರು.