ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಜ್ಜಲರ ಮೂತ್ರ ರಾಜಕೀಯ

Lingaraj Badiger
Updated On : 16 Mar 2013, 10:57 am

ಕನ್ನಡಪ್ರಭ ವಾರ್ತೆ,ಮುದಗಲ್,ಮಾ.15
'ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ' ಎನ್ನುವ ರೀತಿಯಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.10 ರಲ್ಲಿ ಸಾರ್ವಜನಿಕರಿಗೆ ಮೂತ್ರಾಲಯ ನಿರ್ಮಿಸುವ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಸರ್ಕಾರದಿಂದ ಬಂದಂತ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಸಾರ್ವಜನಿಕ ಮೂತ್ರಾಲಯಕ್ಕಾಗಿ ವಾರ್ಡಿನ ಸದಸ್ಯರ ಮತ್ತು ಸಂಘ ಸಂಸ್ಥೆಗಳ ಒತ್ತಾಯದ ಮೇರೆಗೆ 2 ಲಕ್ಷ ನೀಡಿ ಯೋಜನೆಗೆ ಕ್ರಿಯಾ ಯೋಜನೆ ಮಾಡಿ ಜಿಲ್ಲಾ ಯೋಜನಾಧಿಕಾರಿ ಅನುಮೋದನೆಗೆ ಕಳಿಸಿದ್ದು ಅಲ್ಲದೆ ಕಾಮಗಾರಿಗೆ ಟೆಂಡರ್‌ನ್ನು 2 ಬಾರಿ ಕರೆದು ಮುಂದುಡಲಾಗಿತ್ತು. ಪುನಾ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ.
ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಮುಂದಾದಾಗ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರು ತಕರಾರು ಸಲ್ಲಿಸಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗೆಯಲ್ಲಿ ಮೂತ್ರಾಲಯ ನಿರ್ಮಿಸಲು ತಕರಾರು ಸಲ್ಲಿಸಿದರು ಅಧಿಕಾರಿಗಳು ಅದಕ್ಕೆ ಮಣೆ ಹಾಕಿದರು. ಸಾಲದು ಎಂಬಂತೆ ಶಾಸಕ ಮಾನಪ್ಪ ವಜ್ಜಲ್ ಮೊರೆ ಹೋಗಿ ಅವರಿಂದ ಮೂತ್ರಾಲಯ ನಿರ್ಮಿಸದಂತೆ ಮುಖ್ಯಾಧಿಕಾರಿಗೆ ಸೂಚಿಸಿದ್ದರಿಂದ ಕಾಮಗಾರಿ ಅಪೂರ್ಣಗೊಳ್ಳಲು ಕಾರಣವಾಗಿದೆ.
ಶಾಸಕರ ರಾಜಕೀಯ: ಇದ್ದ ಸತ್ಯವನ್ನು ಮರೆ ಮಾಚುತ್ತಿರುವ ಮುಖ್ಯಾಧಿಕಾರಿಗಳು ಮೂತ್ರಾಲಯ ನಿರ್ಮಿಸಲು ಮುಂದಾದ ಗುತ್ತಿಗೆದಾರರಿಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದರಿಂದ ಸಾರ್ವಜನಿಕ ಮೂತ್ರಾಲಯ ಕಾಮಗಾರಿ ನಿಂತು ಹೋಗಿದೆ. ಹಿಂದೆ ಇದ್ದ ಆಡಳಿತ ಮಂಡಳಿ ಕಾಂಗ್ರೆಸ್ ಪಕ್ಷದ್ದಾಗಿದ್ದರಿಂದ ಸಾರ್ವಜನಿಕ ಮೂತ್ರಾಲಯ ನಿರ್ಮಾಣ ಮಾಡುವಲ್ಲಿಯು ಶಾಸಕ ಮಾನಪ್ಪ ವಜ್ಜಲ್ ಸಂಪೂರ್ಣ ರಾಜಕೀಯ ಮಾಡಿದ್ದಾರೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು ಎಂದು ಉದ್ದುದ್ದ ಭಾಷಣ ಮಾಡುವ ಶಾಸಕರೇ ಸಾರ್ವಜನಿಕ ಮೂತ್ರಾಲಯ ನಿರ್ಮಾಣದಲ್ಲಿ ರಾಜಕೀಯ ಮಾಡಿರುವುದು ಸರಿಯಲ್ಲ.
ಪಪಂ ಗೋಡೆ ಮೂತ್ರಾಲಯ: ಪಟ್ಟಣ ಪಂಚಾಯಿತಿ ಸುತ್ತ ಮುತ್ತ ಬ್ಯಾಂಕ್‌ಗಳು, ಕಿರಾಣಿ ಅಂಗಡಿಗಳು, ಹೋಟೆಲ್‌ಗಳು ಇದ್ದು ಅತಿ ಹೆಚ್ಚು ಜನಸಂದಣಿ ಇರುವ ಸ್ಥಳವಾಗಿದ್ದು, ಇಲ್ಲಿ ಸಾರ್ವಜನಿಕರಿಗಾಗಿ ಮೂತ್ರಾಲಯ ಇಲ್ಲದೆ ಇರುವುದು ಎಲ್ಲರಿಗೂ ತಾಪತ್ರಾಯವಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರು ಮೂತ್ರ ವಿಸರ್ಜಿಸಲು ಪಪಂ ನೂತನ ಕಟ್ಟಡದ ಗೋಡೆಯನ್ನೆ ಅವಲಂಬಿಸಿದ್ದಾರೆ. ಇದರಿಂದ ಪಪಂ ಕಚೇರಿ ಸಿಬ್ಬಂದಿ, ಸುತ್ತ ಮುತ್ತಲಿನ ಹೋಟೆಲ್, ಅಂಗಡಿಕಾರರು ದುರ್ವಾಸನೆ ಸೇವಿಸುವ ಯಾತನೆ ಉಂಟಾಗಿದೆ.
ಮೂತ್ರಾಲಯ ನಿರ್ಮಿಸುವಲ್ಲಿ ಅಧಾಕಾರಿಗಳ ದ್ವಂದ್ವ ನಿಲುವಿನಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬರುವ ಜನರು ದೂರದ ಬಸ್ ನಿಲ್ದಾಣ, ಅಥವಾ ಖಾಸಗಿ ಕಟ್ಟಡಗಳ ಸಂದಿಗೊಂದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಮಹಿಳೆಯರಂತು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement