ವಿದ್ಯುತ್ ಕಣ್ಣಾಮುಚ್ಚಾಲೆ
-ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ,ಮುದಗಲ್,ಮಾ.15
ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ದಿಂದಾಗಿ ಬೆಳೆಗೆ ಸಮರ್ಪಕ ನೀರು ಸರಬರಾಜು ಆಗದೆ ಇದ್ದುದರಿಂದ ಬೇಸಿಗೆ ಶೇಂಗಾ ಬೆಳೆ ಸಂಪೂರ್ಣ ಬಾಡುತ್ತಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ತೋಟಗಳನ್ನು ಹೊಂದಿರುವ ರೈತರು ಬೇಸಿಗೆ ಬೆಳೆಯನ್ನಾಗಿ ಶೇಂಗಾ ಬೆಳೆಯನ್ನು ಬಿತ್ತನೆ ಮಾಡಿದ್ದು ಆರು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕಿದ್ದ ಸರ್ಕಾರ ಕೇವಲ 3 ಗಂಟೆ ಮಾತ್ರ ಮೂರು ಲೈನ್ ವಿದ್ಯುತ್ ಸರಬರಾಜು ಮಾಡುತ್ತಿದೆ. ಅಲ್ಲದೆ ಕಡಿಮೆ ವೋಲ್ಟೆಜ್ ಸರಬರಾಜು ಮಾಡುತ್ತಿದ್ದರಿಂದ ರೈತರ ಪಂಪ್‌ಸೆಟ್‌ಗಳು ಸುಟ್ಟು ಮತ್ತಷ್ಟು ನಷ್ಟ ಅನುಭವಿಸುವಂತೆ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರಿಗೆ ನಷ್ಟ: ನಾಗಲಾಪುರ, ಹೂನೂರು, ಆಮದಿಹಾಳ, ಬಯ್ಯಾಪುರ, ತಲೇಖಾನ, ಮಟ್ಟೂರ ಸೇರಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ದುಬಾರಿ ಶೇಂಗಾ ಬೀಜ ಖರೀದಿಸಿ ಬಿತ್ತನೆ ಮಾಡಿದ ಶೇಂಗಾ ಬೆಳೆ ತೇವಾಂಶದ ಕೊರತೆಯಿಂದ ಬೆಳೆ ಒಣಗುತ್ತಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ.
ಸರ್ಕಾರ ಗ್ರಾಮೀಣ ಪ್ರದೇಶಗಳಿಗು 24 ಗಂಟೆ ವಿದ್ಯುತ್ ಸರಬರಾಜು ನೀಡುವುದಾಗಿ ಭರವಸೆ ನೀಡಿದ್ದು ಸುಳ್ಳಾಗಿದೆ. ಚುನಾವಣೆಗಳು ಬಂದಾಗ ಮಾತ್ರ ಗ್ರಾಮೀಣ ಪ್ರದೇಶಗಳು ಈ ಮಂತ್ರಿಗಳಿಗೆ ನೆನಪಾಗುತ್ತದೆ. ನಂತರ ಹಳ್ಳಿಗಳನ್ನೇ ಮರೆತು ಎ.ಸಿ.ವಾಹನಗಳಲ್ಲಿ ಕುಳಿತು ಬಿಡುತ್ತಾರೆ. ರೈತರ ಕಷ್ಟ ಅವರಿಗೆಲ್ಲಿ ಅರ್ಥವಾಗುತ್ತದೆ ಎಂದು ರೈತರು ದೂರಿದ್ದಾರೆ.
ವಿದ್ಯುತ್ ಕಡಿತ: ಮೊದಲೇ ಜಾಗತಿಕ ಬೆಲೆ ಕುಸಿತದಿಂದ ಪರದಾಡುತ್ತಿರುವ ರೈತರು ವಿದ್ಯುತ್ ಕಣ್ಣಾಮುಚಾಲೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಹೇಳಿಕೆ ನೀಡಿ ಈಗ ಅನಿಯಮಿತ ವಿದ್ಯುತ್ ಕಡಿತ ಯಾವ ನ್ಯಾಯವೆಂದು ರೈತರು ಪ್ರಶ್ನಿಸಿದ್ದಾರೆ.
ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಜನಪ್ರತಿನಿಧಿಗಳು ವಿದ್ಯುತ್ ಕಡಿತದ ಬಗ್ಗೆ ತಲೆಕೆಡಿಸಿಕೊಳ್ಳದೆ ಚುನಾವಣೆಯ ಗುಂಗಿನಲ್ಲಿರುವುದು ರೈತರ ದುರಾದೃಷ್ಟಕರ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ, ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ವಿದ್ಯುತ್ ಸರಬರಾಜು ಮಾಡುತ್ತಿದ್ದರಿಂದ ರೈತರ ಬೆಳೆ ನಷ್ಟವಾಗುವಂತೆ ಮಾಡಿದೆ. ರೈತರ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದಿರುವ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ. ರೈತರಿಗೆ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.