ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೋರುತಿಹುದು ಸೇತುವೆ

Lingaraj Badiger
Updated On : 16 Mar 2013, 10:53 am

ಕನ್ನಡಪ್ರಭ ವಾರ್ತೆ,ರಾಯಚೂರು,ಮಾ.15
ರಾಜ್ಯ ಸರ್ಕಾರ ಪ್ರತಿ ವರ್ಷ ರಸ್ತೆಗಳ ದುರಸ್ತಿಗೆ ಕೋಟ್ಯಂತರ ರು. ಸುರಿಯುತ್ತಿದೆ. ಆದರೆ ರಸ್ತೆಗಳ ಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಕಳಪೆ ಕಾಮಗಾರಿ, ರಸ್ತೆ ನಿರ್ಮಿಸದೇ ಅಕ್ರಮ ಎಸಗುವವರಿಂದಾಗಿ ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳ ಕಾರಣಕ್ಕೆ ಈಗಲೂ 109 ಗ್ರಾಮಗಳಿಗೆ ಬಸ್ ಸಂಪರ್ಕವಿಲ್ಲವಾಗಿದ್ದು, ಖಾಸಗಿ ವಾಹನಗಳಲ್ಲೇ ಪ್ರಯಾಣಿಸುವಂಥ ಸ್ಥಿತಿಯಿದೆ.
ಹದಗೆಟ್ಟ ರಸ್ತೆಗಳ ದುರಸ್ತಿಗೆ ಈಗಾಗಲೇ ಕೋಟ್ಯಂತರ ರು. ವ್ಯಯಿಸಿದ್ದರೂ ರಸ್ತೆಗಳ ಚಿತ್ರ ಮಾತ್ರ ಬದಲಾಗಿಲ್ಲ. ಪರಿಣಾಮ ಜನತೆ ಪ್ರಯಾಸಪಡುತ್ತಲೇ ಕಾಲ್ನಡಿಗೆಯಲ್ಲೋ ಇಲ್ಲವೇ ಖಾಸಗಿ ವಾಹನಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿದ್ದಾರೆ.
774 ಗ್ರಾಮಗಳಿಗೆ ಸಂಪರ್ಕ: ಜಿಲ್ಲೆಯಲ್ಲಿ ಒಟ್ಟು 883 ಗ್ರಾಮಗಳಿದ್ದು ಅವುಗಳಲ್ಲಿ 774 ಗ್ರಾಮಗಳಿಗೆ ಮಾತ್ರ ಸಾರಿಗೆ ಸಂಸ್ಥೆಯ ಬಸ್ ಸಂಪರ್ಕವಿದೆ. ಇನ್ನುಳಿದ ಗ್ರಾಮಗಳ ಪೈಕಿ 67 ಗ್ರಾಮಗಳಿಗೆ ಸಂಪರ್ಕ ರಸ್ತೆಗಳ ದುಸ್ಥಿತಿಯಿಂದಾಗಿಯೇ ಬಸ್ ಗಳು ತೆರಳುತ್ತಿಲ್ಲ. ಇನ್ನುಳಿದ 42 ಗ್ರಾಮಗಳಲ್ಲಿ ಜನವಸತಿ ಕೊರತೆಯಿಂದಾಗಿ ಬಸ್ ಸಂಚಾರ ಸ್ಘಗಿತಗೊಳಿಸಲಾಗಿದೆ.
ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ 160 ಗ್ರಾಮಗಳ ಪೈಕಿ ಕೆಟ್ಟ ರಸ್ತೆಗಳ ಕಾರಣಕ್ಕೆ 18 ಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. 2 ಗ್ರಾಮಗಳಿಗೆ ಸಂಪರ್ಕ ರಸ್ತೆ ದುಸ್ಥಿತಿಯ ಕಾರಣ ಬಸ್ ಸಂಚಾರ ಆರಂಭವನ್ನೇ ಮಾಡಿಲ್ಲ. ಕಡಿಮೆ ಜನವಸತಿಯಿರುವ 7 ಗ್ರಾಮಗಳಿಗೆ ಬಸ್ ಸಂಚಾರವಿಲ್ಲವಾಗಿದೆ. ಲಿಂಗಸ್ಗೂರು ತಾಲೂಕಿನ 191 ಗ್ರಾಮಗಳ ಪೈಕಿ 2 ಗ್ರಾಮಗಳಿಗೆ ಕೆಟ್ಟ ರಸ್ತೆಯ ಕಾರಣಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. 1 ಗ್ರಾಮಕ್ಕೆ ರಸ್ತೆ ಸರಿಯಿಲ್ಲದ್ದರಿಂದ ಬಸ್ ಹೋಗಿಲ್ಲ. 2 ಗ್ರಾಮಗಳಲ್ಲಿ ಜನವಸತಿಯ ಕೊರತೆಯಿಂದ ಸಾರಿಗೆ ಸಂಸ್ಥೆಯೇ ಅಲ್ಲಿಗೆ ಬಸ್ ಓಡಿಸುವುದು ವ್ಯರ್ಥ ಎಂದು ನಿರ್ಧರಿಸಿದೆ.
11 ಗ್ರಾಮಕ್ಕೆ ಬಸ್ಸ್ ರದ್ದು: ಸಿಂಧನೂರು ತಾಲೂಕಿನ 173 ಗ್ರಾಮಗಳ ಪೈಕಿ 11 ಗ್ರಾಮಗಳಿಗೆ ರಸ್ತೆ ದುಸ್ಥಿತಿಯ ಕಾರಣಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಕೆಟ್ಟ ರಸ್ತೆಯ ಹಿನ್ನೆಲೆ ಈ ತಾಲೂಕಿನ 3 ಗ್ರಾಮಗಳಿಗೆ ಬಸ್ ಹೋಗಿಯೇ ಇಲ್ಲ. 13 ಗ್ರಾಮಗಳಲ್ಲಿ ಜನವಸತಿ ಕೊರತೆಯ ಕಾರಣಕ್ಕೆ ಬಸ್ ಸಂಚಾರ ಆರಂಭಿಸುವ ಗೋಜಿಗೆ ಸಾರಿಗೆ ಸಂಸ್ಥೆ ಹೋಗಿಲ್ಲ. ಮಾನವಿ ತಾಲೂಕಿನಲ್ಲಿ 171 ಗ್ರಾಮಗಳ ಪೈಕಿ 8 ಗ್ರಾಮಗಳಿಗೆ ತೆರಳುತ್ತಿದ್ದ ಬಸ್‌ಗಳು ರಸ್ತೆ ದುಸ್ಥಿತಿಯ ಕಾರಣಕ್ಕೆ ಈಗ ತೆರಳುತ್ತಿಲ್ಲ. 1 ಗ್ರಾಮಕ್ಕೆ ರಸ್ತೆ ಸಂಪರ್ಕದ ಕೊರತೆಯಿಂದಾಗಿ ಬಸ್ ಹೋಗದಿದ್ದರೆ 3 ಗ್ರಾಮಗಳಲ್ಲಿ ಜನವಸತಿ ಕೊರತೆಯಿಂದ ಬಸ್ ತೆರಳುತ್ತಿಲ್ಲ. ಇನ್ನು ದೇವದುರ್ಗ ತಾಲೂಕಿನಲ್ಲಿ ಅತೀ ಹೆಚ್ಚು ಗ್ರಾಮಗಳಿಗೆ ಬಸ್ ತೆರಳುವುದಿಲ್ಲ ಎಂದು ಸಾರಿಗೆ ಸಂಸ್ಥೆಯು ತಿಳಿಸಿದೆ.
ದೇವದುರ್ಗ ತಾಲೂಕಿನ 188 ಗ್ರಾಮಗಳ ಪೈಕಿ 11 ಗ್ರಾಮಗಳಿಗೆ ಈ ಹಿಂದೆ ತೆರಳುತ್ತಿದ್ದ ಬಸ್ ಈಗ ಹದಗೆಟ್ಟ ರಸ್ತೆಯ ಕಾರಣಕ್ಕೆ ಸಂಚಾರ ನಿಲ್ಲಿಸಿವೆ. 10 ಗ್ರಾಮಗಳಿಗೆ ಸಂಚಾರಕ್ಕೆ ಯೋಗ್ಯ ರಸ್ತೆಯಿಲ್ಲದ್ದರಿಂದ ಬಸ್ ಗಳನ್ನು ಓಡಿಸುವ ಧೈರ್ಯ ಸಾರಿಗೆ ಇಲಾಖೆ ಮಾಡಿಲ್ಲ. ಇನ್ನು 17 ಗ್ರಾಮಗಳಲ್ಲಿ ಜನವಸತಿ ಕೊರತೆಯಿಂದಾಗಿ ಬಸ್ ಓಡುತ್ತಿಲ್ಲ.
ಸಂಚಾರಕ್ಕೆ ಅಡ್ಡಿ: ಜಿಲ್ಲೆಯಲ್ಲಿ ಒಟ್ಟು 883 ಗ್ರಾಮಗಳ ಪೈಕಿ 50 ಗ್ರಾಮಗಳಿಗೆ ಈ ಹಿಂದೆ ಸಂಚರಿಸುತ್ತಿದ್ದ ಬಸ್‌ಗಳು ಹದಗೆಟ್ಟಿರುವ ರಸ್ತೆಗಳ ಕಾರಣಕ್ಕೆ ಸಂಚರಿಸುತ್ತಿಲ್ಲ. ಹಾಗೆಯೇ 17 ಗ್ರಾಮಗಳಿಗೆ ಸಂಚಾರಕ್ಕೆ ಅಯೋಗ್ಯ ರಸ್ತೆಯಿಂದಾಗಿ ಬಸ್ ತೆರಳಿಲ್ಲ. 42 ಗ್ರಾಮಗಳಿಗೆ ಜನವಸತಿಯ ಕೊರತೆಯೇ ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ.
ಸರ್ಕಾರ ಕೋಟ್ಯಂತರ ರು. ರಸ್ತೆ ದುರಸ್ತಿಗೆ ಸುರಿಯುತ್ತಿದೆ. ಆದರೆ ರಸ್ತೆಗಳಲ್ಲಿನ ತಗ್ಗುಗಳು ಮಾತ್ರ ಮುಚ್ಚುತ್ತಿಲ್ಲ. ಹೀಗಾಗಿ ಜನತೆಗೆ ಸರ್ಕಾರಿ ಬಸ್ ಕಾಣದಂಥ ಸ್ಥಿತಿಯಿದೆ. ದಿನವೂ ಖಾಸಗಿ ವಾಹನಗಳಲ್ಲಿಯೇ ಸಂಚರಿಸುವಂಥ ಅನಿವಾರ್ಯತೆ.
ಒಂದೆಡೆ ರಸ್ತೆಗಳು ಹದಗೆಡುತ್ತಲೇ ಸಾಗುತ್ತಿವೆ. ದುರಸ್ತಿ ಕಾಣದ ರಸ್ತೆಗಳಿಂದಾಗಿ ವರ್ಷದಿಂದ ವರ್ಷಕ್ಕೆ ಸಾರಿಗೆ ಸೌಲಭ್ಯದಿಂದ ವಂಚಿತವಾಗುತ್ತಿರುವ ಗ್ರಾಮಗಳ ಸಂಖ್ಯೆ ಏರಿಕೆ ಕಾಣುವ ಭೀತಿಯಿದೆ. ಅದರಿಂದಾಗಿ ಖಾಸಗಿ ವಾಹನಗಳಲ್ಲಿ ಜನತೆ ಜೀವದ ಹಂಗು ತೊರೆದು ಪ್ರಯಾಣಿಸುವಂಥ ದುಸ್ಥಿತಿ ಅನಿವಾರ್ಯವಾಗಿ ಅನುಭವಿಸುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement