'ಒಡಕುಂಡು ಮಾಡುವ ಶಕ್ತಿಗಳ ಮೇಲೆ ನಿಗಾ ಇರಲಿ'
ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.16
ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಣೆ ಮಾಡುತ್ತಿದ್ದವರೇ ಈಗಲೂ ಶೋಷಣೆ ಮಾಡುತ್ತಿದ್ದಾರೆ. ಒಗ್ಗಟ್ಟಾಗಲು ಬಿಡದೆ ಒಡಕುಂಟು ಮಾಡುವ ಹುನ್ನಾರ ನಡೆಸಿದ್ದಾರೆ. ಅಂತಹ ಶಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಕನಕಸೇನೆ ಯುವಕರಿಗೆ ಸಲಹೆ ನೀಡಿದರು.
ನಗರದ ಕನಕದಾಸ ಪಪೂ ಕಾಲೇಜಿನ ಆವರಣದಲ್ಲಿ ತಾಲೂಕು ಕನಕ ಯುವಸೇನೆ ಏರ್ಪಡಿಸಿದ್ದ ಕನಕ ಯುವಸೇನೆ ಗ್ರಾಮ ಘಟಕಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಕನಕಸೇನೆ ಯುವಕರು ಹಾಲುಮತ ಸಮಾಜದ ಇತಿಹಾಸ, ಸಾಮಾಜಿಕ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಂಡು ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಎಂದರು.
ಜವಾಬ್ದಾರಿ ಮರೆಯಬೇಡಿ: ಜನಾಂಗದ ನಡುವೆ ಒಡಕು ತಂದು ರಾಜಕೀಯ ಲಾಭ ಪಡೆಯಲು ಹುನ್ನಾರ ಮಾಡುತ್ತಿರುವುದರಿಂದ ಯುವಕರು ಎಚ್ಚರದಿಂದ ಇರಬೇಕು.
ಶೇ.75ರಷ್ಟು ಪ್ರಮಾಣದಲ್ಲಿ ಇರುವ ಇತರೆ ಶೋಷಿತ ವರ್ಗಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಾದ ಜವಾಬ್ದಾರಿಯನ್ನು ಸಹ ಮರೆಯಬಾರದೆಂದು ವಿವರಿಸಿದರು.
ಅಭಿವೃದ್ಧಿಗಾಗಿ ಒಗ್ಗಟ್ಟಾಗಿ: ದೇಶದಲ್ಲಿ ಶೇ.12ರಷ್ಟು ಜನಸಂಖ್ಯೆ ಇರುವ ಹಾಲುಮತ ಸಮಾಜವು ಸಂಸತ್ತಿನಲ್ಲಿ ಇಬ್ಬರು ಸಂಸದರನ್ನು ಮಾತ್ರ ಹೊಂದಿದೆ. ರಾಜ್ಯದಲ್ಲಿ 3ನೇ ಸ್ಥಾನದಲ್ಲಿದ್ದರೂ ಕೇವಲ ಆರೇಳು ಶಾಸಕರಿದ್ದಾರೆ.
ಜನಸಂಖ್ಯೆ ಆಧಾರದ ಮೇಲೆ ಪರಿಗಣಿಸಿದರೆ 35 ಶಾಸಕರು ಇರಬೇಕು. ಸಮಾಜ ಬಾಂಧವರು ರಾಜಕೀಯ ಅಧಿಕಾರಕ್ಕಾಗಿ ಒಗ್ಗಟ್ಟಾಗುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯುವಂತೆ ಕರೆ ನೀಡಿದರು.
ಮುಖ್ಯ ಭಾಷಣಕಾರ ಬಿ.ಜಿ.ಹುಲಿ ಮಾತನಾಡಿ ಅಜ್ಞಾನ, ಡಾಂಭಿಕತೆಯ ವಿರುದ್ಧ ಹೋರಾಡಿದ ಕನಕದಾಸರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಕನಕಸೇನೆ ಮಾಡಿರುವುದು ಔಚಿತ್ಯ ಪೂರ್ಣವಾಗಿದ್ದು, ಜಾಗೃತಿ ಮೂಡಿಸಲು ಇದರ ಅವಶ್ಯಕತೆ ಇದೆ ಎಂದರು.
ತಿಂಥಣಿ ಕನಕಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿದರು. ಬಿಎಸ್ಸಾರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ಕರಿಯಪ್ಪ ಡೊಳ್ಳು ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ರಮೇಶಪ್ಪ ದಿದ್ದಗಿ, ಜಿಪಂ. ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ನಂಜುಂಡಯ್ಯ ಗುರುವಿನ್, ಗೌಡನಭಾವಿ ನಾಗಪ್ಪ ತಾತ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.