'ಸಿರವಾರಕ್ಕೆ ಸೇರ್ಪಡೆ ಬೇಡ'
ರಾಯಚೂರು: ಮಾನವಿ ತಾಲೂಕಿನ ಹೊಸದಾಗಿ ಘೋಷಿತ ಸಿರವಾರ ತಾಲೂಕಿಗೆ ಬಾಗಲವಾಡ ಮತ್ತಿತರೆ ಗ್ರಾಮಗಳನ್ನು ಸೇರಿಸುವುದಕ್ಕೆ ಬಾಗಲವಾಡ, ಹಿರೇಬಾದರದಿನ್ನಿ ಮತ್ತು ನಕ್ಕುಂದಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾನವಿಯಲ್ಲಿ ಈಚೆಗೆ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಸಿರವಾರ ತಾಲೂಕಿಗೆ ಈ ಗ್ರಾಮಗಳನ್ನು ಸೇರ್ಪಡೆ ಮಾಡುತ್ತಿರುವ ಬಗ್ಗೆ ವಿಷಯ ಗೊತ್ತಾಗಿದ್ದು ಆದರೆ ಅಂಥ ಯಾವುದೇ ಕ್ರಮಕ್ಕೆ ಗ್ರಾಮಸ್ಥರ ವಿರೋಧವಿದೆ ಎಂದು ಎಚ್ಚರಿಸಿದರು.
ಪರದಾಡ: ಸಿರವಾರ ತಾಲೂಕಿಗೆ ಈ ಮೂರು ಗ್ರಾಮಗಳು ಸೇರಿದರೆ ಅದರ ಸುತ್ತಲಿನ ಸುಮಾರು 10ಕ್ಕೂ ಹೆಚ್ಚಿನ ಗ್ರಾಮಗಳ ಜನತೆ ಪರದಾಡಬೇಕಾಗುತ್ತದೆ. ಹೊಸ ತಾಲೂಕು ರಚನೆ ವೇಳೆ ಭೌಗೋಳಿಕ ಅನುಕೂಲ ನೋಡಿ ನಿರ್ಧರಿಸಬೇಕಾಗಿರುವುದು ಅತ್ಯವಶ್ಯ. ಬಾಗಲವಾಡದಿಂದ ಸಿರವಾರ 35 ಕಿ.ಮೀ. ದೂರದಲ್ಲಿದೆ. ಆದರೆ ಮಾನವಿ ತಾಲೂಕು ಕೇಂದ್ರವು ಕೇವಲ 18 ಕಿಮೀ ದೂರದಲ್ಲಿದೆ.
ಸಿರವಾರಕ್ಕೆ ಸರಿಯಾದ ಬಸ್ ವ್ಯವಸ್ಥೆಯೂ ಈ ಗ್ರಾಮಗಳಿಂದ ಇಲ್ಲ. ಖಾಸಗಿ ವಾಹನಗಳ ಲಭ್ಯತೆಯೂ ಇಲ್ಲ. ಮುಖ್ಯವಾಗಿ ನೇರ ರಸ್ತೆ ಸಂಪರ್ಕವೇ ಇಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ತೊಂದರೆ ತಪ್ಪಿಸಲು ಮಾನವಿ ತಾಲೂಕಿನಲ್ಲಿಯೇ ಈ ಗ್ರಾಮಗಳನ್ನು ಮುಂದುವರಿಸುವಂತೆ ಆಗ್ರಹಿಸಿದ್ದಾರೆ.
ಗ್ರಾಮಸ್ಥರ ವಿರೋಧವನ್ನು ಲೆಕ್ಕಿಸದೇ ಸರ್ಕಾರ ಸಿರವಾರಕ್ಕೆ ಸೇರ್ಪಡೆಗೆ ಮುಂದಾದಲ್ಲಿ ಗ್ರಾಮಸ್ಥರು ಹೋರಾಟಕ್ಕಿಳಿಯಲಿದ್ದಾರೆ. ಹೊಸ ತಾಲೂಕು ವ್ಯಾಪ್ತಿ ನಿರ್ಧರಿಸುವುದಕ್ಕೂ ಮುನ್ನಾ ಗ್ರಾಮಸ್ಥರ ಅಭಿಪ್ರಾಯ ಪಡೆದು ಮುಂದುವರಿಯುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರೆಡ್ಡಪ್ಪ ಬಾಗಲವಾಡ ಒತ್ತಾಯಿಸಿದ್ದಾರೆ.
ಬಸವರಾಜಪ್ಪ ರಾಮರೆಡ್ಡಿ, ನಾಗರಾಜ ಪಟವಾರಿ, ಶರಣಪ್ಪಗೌಡ ನಕ್ಕುಂದಿ, ನಾಗಣ್ಣ ಸಾಹುಕಾರ, ಅಮರೇಶಪ್ಪ ಬಿ.ಕೆ, ತಿಪ್ಪಣ್ಣ ಬಾಗಲವಾಡ, ಗುರಪ್ಪ ಸಾಹುಕಾರ, ವೆಂಕೋಬ ನಾಯಕ, ಗವಿಯಪ್ಪ ಪತ್ತಾರ, ಮಲ್ಲನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.