ಕಾಲುವೆಗೆ ಟ್ರ್ಯಾಕ್ಟರ್: 5 ಸಾವು, 13 ಜನ ಗಾಯ
ಕ.ಪ್ರ. ವಾರ್ತೆ,ದೇವದುರ್ಗ, ಮಾ17
ತಾಲೂಕಿನ ಜಾಗಟಗಲ್ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ನಾರಾಯಣಪುರ ಬಲದಂಡೆ ಕಾಲುವೆಗೆ ಟ್ರಾಕ್ಟರ್ ಟ್ರಾಲಿ ಉರುಳಿ 5 ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಜನರಿಗೆ ಗಾಯಗಳಾಗಿವೆ.
ಮೃತರನ್ನು ಶಿವಮ್ಮ, ಯಲ್ಲಮ್ಮ, ರಂಗಮ್ಮ ಮತ್ತು ರಮೇಶ್ ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು ಮಾನವಿ ತಾಲೂಕಿನ ಸಿರವಾರ ಪಟ್ಟಣಕ್ಕೆ ಸೇರಿದವರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಎಂಜಿನ್‌ನಿಂದ ಬೇರ್ಪಟ್ಟ ಟ್ರಾಲಿ: ಸಿರವಾರದಿಂದ ನಾರಾಯಣಪುರ ಬಲದಂಡೆ ಕಾಲುವೆಯ ಏರಿಯ ಮೇಲೆ ಇವರು ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದಾಗ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಟ್ರ್ಯಾಕ್ಟರ್‌ನ ಎಂಜಿನ್ ಟ್ರಾಲಿಯಿಂದ ಬೇರ್ಪಟ್ಟು ಕಾಲುವೆಗೆ ಉರುಳಿದೆ.
ಇದರಿಂದಾಗಿ ಸ್ಥಳದಲ್ಲಿಯೇ ಐವರು ಮೃತಪಟ್ಟು, 13 ಜನಕ್ಕೆ ಗಾಯಗಳಾಗಿವೆ. ಇನ್ನುಳಿದ ಕಾರ್ಮಿಕರು ಕಾಲುವೆಯಲ್ಲಿ ಈಜಿ ದಡ ಸೇರಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ: 6 ಜನರು ಗಾಯ
ಚಳ್ಳಕೆರೆ: ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೂಲಿಕಾರರು ತುಂಬಿದ ಟ್ರ್ಯಾಕ್ಸ್ ಸಮೀಪದ ಬುಡ್ನಯಹಟ್ಟಿ ಬಳಿ ಎದುರುಬಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 6 ಜನ ಗಾಯಗೊಂಡಿದ್ದಾರೆ.
ಗಾಯಾಳುಗಳು ರಾಯಚೂರು ಜಿಲ್ಲೆ ಎರಗುಡಚನಹಳ್ಳಿಯ ಗ್ರಾಮಸ್ಥರಾಗಿದ್ದು, ಕೂಲಿಗಾಗಿ ಬೆಂಗಳೂರಿಗೆ ಹೊರಟ್ಟಿದರು. ಲಾರಿಯನ್ನು ಹಿಂದಕ್ಕೆ ಹಾಕಲು ಬಂದ ಕಾರಿಗೆ ವಾಹನ ಡಿಕ್ಕಿ ಹೊಡೆದಿದ್ದು, ಟ್ರ್ಯಾಕ್ಸ್‌ನಲ್ಲಿದ್ದ ಪರುಶುರಾಮ, ಆನಂದ, ಅಂಬರಕೋಳಿ, ನಾಗರಾಜ, ಶರಣಬಸವ, ಮಹೇಶ್ ಗಾಯಗೊಂಡಿದ್ದಾರೆ. ಇವರನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾದ ಕೂಡಲೇ 2 ವಾಹನಗಳ ಮಾಲೀಕರು ನಾಪತ್ತೆಯಾಗಿದ್ದಾರೆ. ಉಪ ನಿರೀಕ್ಷಕ ಡಿ.ಜಿ. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು. ಠಾಣಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.