ಕಿರುಕುಳ ನೀಡಿ ಪತ್ನಿ ಕೊಲೆ
ರಾಯಚೂರು: ಮಸ್ಕಿಯಲ್ಲಿ ಮಹಿಳೆಯೊಬ್ಬಾಕೆಯನ್ನು ಆಕೆಯ ಪತಿ ಕೊಲೆ ಮಾಡಿದ ಬಗ್ಗೆ ದೂರು ದಾಖಲಾಗಿದೆ. ಮೃತಳನ್ನು ಪಟ್ಟಣದ ಕುರುಬರ ಓಣಿ ನಿವಾಸಿ ಸುವರ್ಣ ಎಂದು ಗುರುತಿಸಲಾಗಿದೆ. ಈಕೆಯನ್ನು ಚಂದ್ರಶೇಖರ್ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರದಲ್ಲಿ ಈಕೆಯ ಪತಿ ಆಗಾಗ್ಗೆ ಮದ್ಯ ಸೇವನೆ ಮತ್ತಿತರೆ ಕಾರಣಗಳಿಗೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದನೆಂದು ದೂರಲಾಗಿದ್ದು, ಅದರಿಂದ ಬೇಸತ್ತಿದ್ದ ಆಕೆ ತನ್ನ ತವರಿನಲ್ಲಿಯೇ ವಾಸವಾಗಿದ್ದಳು. ಆದರೆ ಅಲ್ಲಿಗೂ ಬಂದ ಆಕೆಯ ಪತಿಯು ಆಕೆಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆಂದು ಪೊಲೀಸರಿಗೆ ದೂರಲಾಗಿದೆ. ಈ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ: ಬೈಕ್ ಸವಾರ ಸಾವು
ರಾಯಚೂರು: ನಗರದ ಹೊರವಲಯದ ಬೈಪಾಸ್ ರಸ್ತೆಯ ಮರ್ಚೆಡ್ ಗ್ರಾಮದ ಬಳಿ ಅಂಬ್ಯುಲೆನ್ಸ್ ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವಿಗೀಡಾಗಿದ್ದಾನೆ. ಮೃತನನ್ನು ಗೋವಿಂದ ಎಂದು ಗುರುತಿಸಲಾಗಿದೆ. ಈತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಅಂಬ್ಯುಲೆನ್ಸ್ ಡಿಕ್ಕಿ ಹೊಡೆದಿದ್ದರಿಂದ ಆತ ತೀವ್ರ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅನಾರೋಗ್ಯ: ಮಹಿಳೆ ಆತ್ಮಹತ್ಯೆ
ರಾಯಚೂರು: ಸಿಂಧನೂರಿನ ಖಾದ್ರಿಯಾ ಕಾಲನಿಯಲ್ಲಿ ಮಹಿಳೆಯೊಬ್ಬಳು ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಸಾಬೇರಾ ಬೇಗಂ ಎಂದು ಗುರುತಿಸಲಾಗಿದೆ. ಈಕೆ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೇಸತ್ತ ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಸಿಂಧನೂರು ನಗರ ಆಸ್ಪತ್ರೆಗೆ ದಾಖಲಿಸಿ ನಂತರ, ಬಳ್ಳಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.