ಕುಡಿವ ನೀರು ಕೃಷಿಗೆ; ಅಭಾವ ಸೃಷ್ಟಿ
ಕ.ಪ್ರ. ವಾರ್ತೆ, ರಾಯಚೂರು, ಮಾ.17
ತುಂಗಭದ್ರಾ ಎಡದಂಡೆಯಿಂದ ಜಿಲ್ಲೆಯಲ್ಲಿ ಕುಡಿವ ನೀರಿಗೆ ಸಂಗ್ರಹಿಸಿಡಲು ಹರಿಸಿದ ನೀರನ್ನು ಕಾಲುವೆಯ ಮೇಲ್ಭಾಗದಲ್ಲಿ ಕೃಷಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಅದೇ ರೀತಿ ಅಪಾರ ನೀರು ಹಳ್ಳಕ್ಕೆ ಹರಿದು ಹೋಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿವ ನೀರಿನ ತೀವ್ರ ಅಭಾವ ಉಂಟಾಗುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜನತೆ ತೊಂದರೆಗೆ ಸಿಲುಕಲಿದ್ದಾರೆಂದು ಲೋಕಜನಶಕ್ತಿ ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನೂರ್ ಮಹ್ಮದ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯದಿಂದ 915 ಕ್ಯುಸೆಕ್ ನೀರನ್ನು ಕುಡಿವ ನೀರಿಗೆ ಬಳಸಲು ಹರಿಬಿಡಲಾಗಿದೆ. ಆದರೆ ಎಡದಂಡೆ ಕಾಲುವೆಯ ವಡ್ಡರಹಟ್ಟಿ ವಿಭಾಗದ ವ್ಯಾಪ್ತಿಯಲ್ಲಿ ನೀರನ್ನು ಕೃಷಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಅದರಿಂದಾಗಿ ಕಾಲುವೆಯ ಕಡೆಯ ಭಾಗದ ಸಿರವಾರ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಶೂನ್ಯಕ್ಕೆ ಬಂದು ಸೇರಿದೆ ಎಂದು ದೂರಿದರು.
ಶಾಸಕರದ್ದು ಪ್ರಚಾರ ಪಡೆವ ಉದ್ದೇಶ: ಸ್ಥಳೀಯ ಶಾಸಕ ಸೈಯದ್ ಯಾಸೀನ್ ಪ್ರಚಾರ ಪಡೆಯುವ ಉದ್ದೇಶದಿಂದ ತುಂಗಭದ್ರಾ ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ರನ್ನು ಭೇಟಿ ಮಾಡಿ ನೀರು ಹರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಶಾಸಕರು ಮುನಿರಾಬಾದ್ಗೆ ತೆರಳದೇ ನಗರದಲ್ಲಿಯೇ ಹಿರಿಯ ಎಂಜಿನಿಯರ್ ಜತೆ ಚರ್ಚಿಸಿದ್ದಾರೆ. ಆದರೆ, ಶಾಸಕರು ನಗರಕ್ಕೆ ಕುಡಿವ ನೀರಿನ ಸಮಸ್ಯೆ ನಿವಾರಣೆಯಲ್ಲಿ ತಾವೇ ಪ್ರಮುಖ ಪಾತ್ರ ವಹಿಸಿದ್ದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರ ಪ್ರಯತ್ನದಿಂದಾಗಿ ನಗರದ ಜನತೆ ಸದ್ಯ ಕುಡಿವ ನೀರು ಪಡೆಯುತ್ತಿದ್ದಾರೆಯೇ ವಿನಾ ಶಾಸಕ ಸೈಯದ್ ಯಾಸೀನ್ರಿಂದ ಅಲ್ಲ ಎಂಬುದನ್ನು ಅರಿಯಬೇಕೆಂದ ಅವರು, ಮಾನವಿ ಶಾಸಕ ಹಂಪಯ್ಯ ನಾಯಕ ಸಹ ನೀರಿಗಾಗಿ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಮಾನವಿ ತಾಲೂಕಿನಲ್ಲಿ ರಸ್ತೆ ತಡೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಶಾಸಕರಿಗೆ ನಿಜವಾದ ಕಾಳಜಿಯಿದ್ದಲ್ಲಿ ವಡ್ಡರಹಟ್ಟಿ ನೀರಾವರಿ ಇಲಾಖೆಯ ಎದುರು ನೀರಿನ ದುರ್ಬಳಕೆ ತಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿ ಎಂದು ಸಲಹೆ ನೀಡಿದರು.
ಉರ್ದು ಶಾಲಾ ವಿಚಾರ ರಾಜಕೀಯಕ್ಕೆ ಬಳಕೆ: ನಗರದ ಕೌಮಿ ಉರ್ದು ಶಾಲೆಯ ಸ್ಥಳಾಂತರ ವಿಚಾರವನ್ನು ಅನಗತ್ಯವಾಗಿ ರಾಜಕೀಯಕ್ಕೆ ಬಳಸಿಕೊಳ್ಳುವ ಕಾರ್ಯವನ್ನು ನ್ಯೂ ಎಜುಕೇಷನ್ ಸೊಸೈಟಿಯ ಪ್ರಮುಖ ಮಾಜಿ ಸಂಸದ ಸಮದ್ ಸಿದ್ದಿಖಿ ಮಾಡುತ್ತಿದ್ದಾರೆ. ಅವರು ತಮ್ಮ ಪುತ್ರನನ್ನು ರಾಜಕೀಯವಾಗಿ ಬೆಳೆಸಲು ಈ ರೀತಿಯಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆಂದು ಟೀಕಿಸಿದರು. ಶಾಸಕ ಸೈಯದ್ ಯಾಸೀನ್ ಮತ್ತು ಸಮದ್ ಸಿದ್ದಿಖಿ ಮಧ್ಯೆ ರಾಜಕೀಯ ಲಾಭಕ್ಕೆ ಪೈಪೋಟಿ ನಡೆದಿದೆಯೇ ವಿನಾ ಅವರಲ್ಲಿ ಜನಪರ ಕಾಳಜಿಯಿಲ್ಲ ಎಂದು ಆರೋಪಿಸಿದ ಅವರು, ಸಮದ್ ಸಿದ್ದಿಖಿ ಅವರು ಈ ಹಿಂದೆ ಕಲ್ಲೂರು ಗ್ರಾಮದಲ್ಲಿ ನ್ಯೂ ಎಜುಕೇಷನ್ ಸೊಸೈಟಿಯಿಂದ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಿ ನಂತರ ಹಣ ದುರ್ಬಳಕೆ ಮಾಡಿಕೊಂಡು ಮುಚ್ಚಿದ್ದನ್ನು ಮರೆತಂತಿದೆ. ಆಗ ವಿದ್ಯಾರ್ಥಿಗಳ ಹಿತ ಸಿದ್ದಿಖಿ ಅವರಿಗೆ ಗಮನಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.
ರಾಜಕೀಯ ಲಾಭಕ್ಕಾಗಿ ಆರೋಪ: ವಕ್ಫ್ ಮಂಡಳಿಯು ಉರ್ದು ಶಾಲೆಯನ್ನು ತೆರವುಗೊಳಿಸುವ ನೋಟಿಸ್ ನೀಡುವ ಮೊದಲು ಲೀಸ್ ಆಧಾರದಲ್ಲಿ ತನ್ನ ಜಾಗವನ್ನು ಸದ್ಯ ಕಾರ್ಯನಿರ್ವಹಿಸುತ್ತಿರುವ ನ್ಯೂ ಎಜುಕೇಷನ್ ಸೊಸೈಟಿಗೆ ನೀಡಲು ಆಸಕ್ತಿ ತೋರಿದರೂ ಸಿದ್ದಿಖಿ ಅವರು ಅದಕ್ಕೆ ನಿರಾಕರಿಸಿದ್ದಾರೆ.
ಸದ್ಯ ರಾಜಕೀಯ ಲಾಭಕ್ಕಾಗಿ ಶಾಸಕರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಶಾಸಕ ಸೈಯದ್ ಯಾಸೀನ್ ಅವರಿಗೆ ಮತದಾರರು ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದರು. ಈ ವೇಳೆ ಪಕ್ಷದ ಪ್ರಮುಖರಾದ ಶೇಖರಗೌಡ, ಸೈಯದ್ ಮಸೂರ್ ಅಲಿ, ಶಫಿ ಮಹ್ಮದ್ ಉಪಸ್ಥಿತರಿದ್ದರು.