ಚುನಾವಣೆ ಸೋಲಿಗೆ ಪಕ್ಷ ತೊರೆಯುವುದಿಲ್ಲ
ದೇವದುರ್ಗ: ಕಾಂಗ್ರೆಸ್ ತಾಲೂಕು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜಿನಾಮೆ ನೀಡಿಲ್ಲ ಎಂದು ಯಕ್ಬಾಲ ಸಾಬ್ ಹೌದುಡಿ ತಿಳಿಸಿದ್ದಾರೆ.
ಇತ್ತೀಚೆಗೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವದುರ್ಗ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆ ಹಿನ್ನೆಲೆಯಲ್ಲಿ ತಾವು ರಾಜಿನಾಮೆ ನೀಡಲು ನಿರ್ಧರಿಸಿದ್ದು ನಿಜ. ಆದರೆ ರಾಜಿನಾಮೆ ಸಲ್ಲಿಸಿಲ್ಲ. ಸದ್ಯ ತಮ್ಮ ನಿರ್ಧಾರ ಬದಲಿಸಿ ಹುದ್ದೆಯಲ್ಲಿ ಮುಂದುವರಿಯುತ್ತಿರುವುದಾಗಿ ತಿಳಿಸಿದರು.
ಮತದಾರರು ನೀಡಿದ ತೀರ್ಪಿಗೆ ತಲೆಬಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಜನಸೇವೆ ಮೂಲಕ ಜನಮನ ಗೆಲ್ಲುವುದಾಗಿ ತಿಳಿಸಿದ ಅವರು, ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಸಂಸದ ಎ.ವೆಂಕಟೇಶ ನಾಯಕ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ ಸೇರಿ ಪಕ್ಷದ ಮುಖಂಡರು ತಮ್ಮನ್ನು ಪಕ್ಷದಲ್ಲಿ ಮುಂದುವರಿಯಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ತಮ್ಮ ರಾಜಿನಾಮೆ ನಿರ್ಧಾರ ಕೈಬಿಟ್ಟಿದ್ದಾಗಿ ಹೇಳಿದರು.
ಈ ಸಂದರ್ಭ ಜಿಪಂ ಮಾಜಿ ಸದಸ್ಯ ಎ.ರಾಜಶೇಖರ ನಾಯಕ, ತಾಲೂಕು ಯುವ ಘಟಕದ ಅಧ್ಯಕ್ಷ ಶೇಖ್ ಮುನ್ನಾಭಾಯಿ ಉಪಸ್ಥಿತರಿದ್ದರು.