ನೀರಿನ ಸಮಸ್ಯೆ; ಪರಿಶೀಲನೆ
ಮುದಗಲ್: ಸಮೀಪದ ಕನಸಾವಿ ಗ್ರಾಮ ಸೇರಿದಂತೆ ನಾಗಲಾಪುರ ಭಾಗದ ತಾಂಡಾಗಳಲ್ಲಿಯ ಕುಡಿವ ನೀರಿನ ಸಮಸ್ಯೆ ಕುರಿತು ತಹಸೀಲ್ದಾರ್ ಎನ್.ಬಿ. ಪಾಟೀಲ ನೇತೃತ್ವದಲ್ಲಿ ಇಒ ವೀರಭದ್ರಪ್ಪ, ಎಇಇ ಸಿ.ಎಸ್. ಪಾಟೀಲ ಪರಿಶೀಲಿಸಿದರು. ಕನಸಾವಿ ಗ್ರಾಮದಲ್ಲಿ ಅಧಿಕಾರಿಗಳ ತಂಡ ತೆರಳಿ ಬತ್ತಿದ ಐತಿಹಾಸಿಕ ಬಾವಿ ಪರಿಶೀಲಿಸಿ ಗ್ರಾಮಸ್ಥರ ಜೊತೆಗೆ ನೀರಿನ ಸಮಸ್ಯೆ ಕುರಿತು ಚರ್ಚಿಸಿದರು.
ಗ್ರಾಮದಲ್ಲಿ ವಿದ್ಯುತ್ ಮತ್ತು ಕೆಟ್ಟ ವಿದ್ಯುತ್ಪರಿವರ್ತಕ ಸಮಸ್ಯೆಯೇ ಹೆಚ್ಚಾಗಿದೆ. ಇದ್ದ ಕೊಳವೆಬಾವಿಗಳಲ್ಲಿ ನೀರು ಬಳಸಬೇಕೆಂದರೆ ವಿದ್ಯುತ್ ಸಮಸ್ಯೆ ಎದುರಾಗಿದೆ.
ಕುಡಿವ ನೀರು ಬರುವ ಪ್ರದೇಶದಲ್ಲಿ ಬೋರವೆಲ್ ಕೊರೆಸಬೇಕು, ಈಗಾಗಲೇ ಒಂದೇ ಸ್ಥಳದಲ್ಲಿ ಬೋರವೆಲ್ ಕೊರೆಯಿಸುವ ಮೂಲಕ ಸರ್ಕಾರಿ ಹಣವನ್ನು ಹಾಳು ಮಾಡಲಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದ್ದ ಕುಡಿವ ನೀರಿನ ಪೈಪ್ಲೈನ್ಗೆ ಅಲ್ಲಲ್ಲಿ ಅಕ್ರಮವಾಗಿ ಕುಡಿವ ನೀರಿನ ಸಂಪರ್ಕ ಪಡೆದಿದ್ದು ಅವುಗಳನ್ನು ಕಡಿತಗೊಳಿಸಿ ನೇರವಾಗಿ ಗುಮ್ಮಿಗೆ ನೀರು ಹರಿಸಬೇಕು. ಗ್ರಾಮಸ್ಥರಿಗೆ ಅದು ಸದುಪಯೋಗವಾಗಲಿದೆ ಎನ್ನುವ ಅಭಿಪ್ರಾಯವನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಹೇಳಿದರು. ಅಕ್ರಮ ನಳಗಳ ಸಂಪರ್ಕವನ್ನು ಕಡಿತಗೊಳಿಸಬೇಕೆಂದು ತಹಸೀಲ್ದಾರ್, ಎಇಇ ಆಮದಿಹಾಳ ಗ್ರಾಪಂ ಪಿಡಿಒ ಶಿವಾನಂದ ಅವರಿಗೆ ಸೂಚಿಸಿದರು.
ನಂತರ ತಹಸೀಲ್ದಾರ್ ಎನ್.ಬಿ. ಪಾಟೀಲ ಮಾತನಾಡಿ, ನಾಳೆ ವಿದ್ಯುತ್ ಪರಿವರ್ತಕ ಅಳವಡಿಸಲಾಗುವುದು. ಬೇಸಿಗೆ ಮುಗಿಯುವವರಿಗೆ ಗ್ರಾಮಸ್ಥರು ಕುಡಿವ ನೀರಿಗಾಗಿ ಸಹಕಾರ ನೀಡಬೇಕೆಂದು ಹೇಳಿದರು.