ಫುಲ್ ಬ್ರೈಟ್ ಶಿಷ್ಯವೇತನ; ಮಾಹಿತಿ
ರಾಯಚೂರು: ನಗರದ ಎಲ್ವಿಡಿ ಕಾಲೇಜಿನಲ್ಲಿ ಇತ್ತೀಚೆಗೆ ಫುಲ್ ಬ್ರೈಟ್ ಶಿಷ್ಯವೇತನ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚೆನ್ನೈನ ಅಮೆರಿಕ ರಾಯಭಾರ ಕಚೇರಿಯ ಫುಲ್ ಬ್ರೈಟ್ ಶಿಷ್ಯವೇತನ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ವಾಸುದೇವನ್ ಮಾತನಾಡಿ, ಭಾರತದ ವಿದ್ಯಾರ್ಥಿಗಳು ಈ ಶಿಷ್ಯವೇತನದ ನೆರವಿನಿಂದ ಅಮೆರಿಕದಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. ಕೃಷಿ ವಿವಿ ಸ್ನಾತಕೋತ್ತರ ವಿಭಾಗ ಡೀನ್ ಡಾ. ಎಂ.ಕೆ. ನಾಯಕ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸವ ಖೇಣೇದ್ ಮತ್ತಿತರರು ಇದ್ದರು. ಕಾಲೇಜಿನ ಎಂಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
24ರಂದು ತಾ. ಕನ್ನಡ ಸಾಹಿತ್ಯ ಸಮ್ಮೇಳನ
ರಾಯಚೂರು: ಮಾನವಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಮಾ.24ರಂದು ನಡೆಯಲಿದೆ ಎಂದು ತಾಲೂಕು ಕಸಾಪ ಪ್ರಕಟಣೆ ತಿಳಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಈ ಹಿಂದೆ ಸಮ್ಮೇಳನವನ್ನು ಮುಂದೂಡಲಾಗಿತ್ತು. ಆದರೆ ಸದ್ಯ ಕನ್ನಡ ಸಾಹಿತ್ಯ ಸಮ್ಮೇಳನ ಮಾ. 24ರಂದು ನಡೆಸಲು ಈಚೆಗೆ ಮಾನವಿ ಪಟ್ಟಣದ ಕಲ್ಮಠ ಶಾಲೆಯಲ್ಲಿ ಕರೆದಿದ್ದ ಕಸಾಪ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ತಾಯಪ್ಪ ಹೊಸೂರು ತಿಳಿಸಿದ್ದಾರೆ.
'ಹೇಳಿಕೆ ಹಾಸ್ಯಾಸ್ಪದ'
ರಾಯಚೂರು: ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ವರ್ಚಸ್ಸು ಪ್ರಭಾವ ಬೀರಿಲ್ಲ, ಹಣದ ಹೊಳೆ ಹರಿದಿದೆ. ನಗರಸಭೆಯಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸಿನಿಂದ ಹೆಚ್ಚಿನ ಸ್ಥಾನ ಗಳಿಸಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್ ಲೇವಡಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ 27 ಸಂಘಟನೆಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟ ಮುಂದುವರಿಸಲಿವೆ. ಸಂಘಟನೆಗಳಿಗೆ ಯಾವುದೇ ಪಕ್ಷ ಅಥವಾ ವ್ಯಕ್ತಿ ಮುಖ್ಯವಲ್ಲ. ಭ್ರಷ್ಟಾಚಾರ ವಿರೋಧಿ ಹೋರಾಟ ಮುಖ್ಯವಾಗಿದೆ. ಹೀಗಾಗಿ ಮುಂದೆಯೂ ಹೋರಾಟ ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಮಹಾಸಭಾಕ್ಕೆ ಆಯ್ಕೆ
ರಾಯಚೂರು: ಅಖಿಲ ಭಾರತ ವೀರಶೈವ ಮಹಾಸಭಾದ ಯುವಘಟಕದ ಜಿಲ್ಲಾಧ್ಯಕ್ಷರಾಗಿ ಹೆಂಬೆರಾಳ ರಾಜಶೇಖರ್ ಪಾಟೀಲ್ ನೇಮಕಗೊಂಡಿದ್ದಾರೆ. ಈ ಕುರಿತು ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಕಾಮರೆಡ್ಡಿ ಅವರು, ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಅವರ ಶಿಫಾರಸಿನ ಮೇರೆಗೆ ಹೆಂಬೆರಾಳ ರಾಜಶೇಖರ್ ಪಾಟೀಲ್ ಅವರನ್ನು ಜಿಲ್ಲಾ ಯುವಘಟಕದ ಅಧ್ಯಕ್ಷರಾಗಿ ನೇಮಿಸಿದ್ದಾಗಿ ತಿಳಿಸಿದ್ದಾರೆ.