ರೈತ ದೇಶದ ಬೆನ್ನೆಲುಬು: ಶರಣಬಸವ
ಕ.ಪ್ರ. ವಾರ್ತೆ, ಸಿಂಧನೂರು, ಮಾ.17
ಇಂದಿನ ತಂತ್ರಜ್ಞಾನಯುಗದಲ್ಲಿ ನಾವು ಎಷ್ಟೇ ಮುಂದುವರೆದರೂ ನಮಗೆ ಬೇಕಾಗಿರುವ ಆಹಾರ ಧಾನ್ಯಗಳನ್ನು ರೈತರ ಶ್ರಮದಿಂದ ಮಾತ್ರ ಪಡೆಯಲಾಗುವುದು. ಇದರಿಂದ ಕೃಷಿ ಅಭಿವೃದ್ಧಿಯಾಗಬೇಕಾದರೆ ರೈತ ಅನುಭವಿಸುವ ಸಮಸ್ಯೆಗಳು ದೂರಾಗಬೇಕೆಂದು ಎಂದು ಸಿಂಧನೂರಿನ ಸಹಾಯಕ ಕೃಷಿ ಅಧಿಕಾರಿ ಶರಣಬಸವ ತಿಳಿಸಿದರು.
ನಗರದ ಶರಣಬಸವೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನವರು ಹಮ್ಮಿಕೊಂಡಿದ್ದ ದಿ. ನೀಲಕಂಠಗೌಡ ಪಾಟೀಲ್ ಗೊರೇಬಾಳ ಸ್ಮಾರಕ ದತ್ತಿಉಪನ್ಯಾಸ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿ ಹಲವಾರು ಕೃಷಿಗೆ ಸಂಬಂಧಪಟ್ಟ ಜನಪದ ತ್ರಿಪದಿಗಳನ್ನು ವಿವರಿಸಿದರು.ಮುಖ್ಯ ಅತಿಥಿ ಗಿರಿಜಾ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ವೀರನಗೌಡ ಗುಮಗೇರಿ ಮಾತನಾಡಿ, ವಿದ್ಯಾವಂತ ಯುವನಜತೆ ಕೃಷಿ ಕಾಯಕದ ಕಡೆಗೆ ಹೆಚ್ಚು ಒಲವು ತೋರಬೇಕೆಂದು ಸಲಹೆ ನೀಡಿದರು.
ಕೃಷಿ ಕಡೆಗೆ: ಇರಕಲ್ಗಡ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ದೊಡ್ಡಪ್ಪ ಸಂಗನಾಳ ಮಾತನಾಡಿ, ರೈತರಿಗೆ ಸಕಾಲದಲ್ಲಿ ಸೌಲಭ್ಯಗಳು ದೊರೆತರೆ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ರೈತರ ಶ್ರಮವನ್ನು ಅರಿತುಕೊಂಡು ಕೃಷಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದರು.
ಜೆಡಿಎಸ್ ಯುವ ಮುಖಂಡ ಸುಮಿತ್ತಡಕಲ್ ಮಾತನಾಡಿ, ದಿ. ನೀಲಕಂಠಗೌಡರು ಉದ್ಯೋಗದಲ್ಲಿ ಇಂಜಿನಿಯರ್ ಆಗಿದ್ದರೂ ಕೃಷಿಯ ಕಡೆಗೆ ಗಮನಹರಿಸಿದ್ದರು ಹಾಗೂ ಬಸವ ಕೇಂದ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸರಳ ಸಜ್ಜನ ವ್ಯಕ್ತಿಯಾಗಿದ್ದರೆಂದು ಸ್ಮರಿಸಿದರು.
ಸೇವೆ ಮಾಡೋಣ: ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ಮಾರ್ಗದರ್ಶನ ಮಾಡಿ ಎಲ್ಲರೂ ಸೇರಿ ಕನ್ನಡಮ್ಮನ ಸೇವೆ ಮಾಡೋಣವೆಂದು ತಿಳಿಸಿದರು.
ದತ್ತಿ ದಾನಿಗಳು ಹಾಗೂ ನಗರಸಭೆಯ ನೂತನ ಸದಸ್ಯ ಶರಣಬಸವ ಪಾಟೀಲ್, ಶರಣಬಸವೇಶ್ವರ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ನೀಲಮ್ಮಗಂಗಾಧರಯ್ಯ ಹಿರೇಮಠ, ಪತ್ರಕರ್ತೆ ಶಿವಲೀಲಾ ಹಿರೇಮಠ, ತಾಲೂಕ ಕಸಾಪ ಗೌರವ ಕಾರ್ಯದರ್ಶಿ ವೀರೇಶ ಗೋನವಾರ ಉಪಸ್ಥಿತರಿದ್ದರು. ಶಿಕ್ಷಕ ಗಂಗಾಧರಯ್ಯ ಹಿರೇಮಠ ಸ್ವಾಗತಿಸಿದರು. ಬೀರಪ್ಪ ಶಂಭೋಜಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪರಮೆಶಪ್ಪ ಚಿಂತಮಾನದೊಡ್ಡಿ ವಂದಿಸಿದರು. ಶಿಕ್ಷಕ ಬಸವರಾಜ ಅಂಗಡಿ ನಿರೂಪಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ನಗರಸಭೆಯ 19ನೇ ವಾರ್ಡ್ಗೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಶರಣಬಸವ ಪಾಟೀಲ್ ಅವರನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.