ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವ ಸಮಾರೋಪ
ರಾಯಚೂರು: ಮಂತ್ರಾಲಯದಲ್ಲಿ ಭಾನುವಾರ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದ ಕಡೆಯ ದಿನ ವಿದ್ಯಾರ್ಥಿಗಳು ಶ್ರೀಸುಧಾ ಗ್ರಂಥದ ಅನುವಾದ ನಡೆಸಿದರು.
ಶ್ರೀಮಠದ ಯಾಗಮಂಟಪದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಯತೀಂದ್ರ ತೀರ್ಥರು ಸೇರಿದಂತೆ ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಆರು ಜನ ವಿದ್ಯಾರ್ಥಿಗಳು ಶ್ರೀಆಚಾರ್ಯ ಮಧ್ವರು ರಚಿಸಿದ ಗ್ರಂಥ ಶ್ರೀಮನ್ನ್ಯಾಯ ಸುಧಾದ ಮಂಗಳ ಅನುವಾದ ನಡೆಸಿಕೊಟ್ಟರು. ಮಂಗಳ ಗೋಷ್ಠಿಯ ಅಧ್ಯಕ್ಷತೆಯನ್ನು ರಾಜಾ ಗಿರಿಯಾಚಾರ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸುಧಾ ಮಂಗಳ ಪೂರೈಸಿದ ಚಿಲಕಲಡೋಣಾ ಕರಣಂ ವೆಂಕಟೇಶಾಚಾರ್ಯ, ಆರ್.ವಾಸುದೇವಾಚಾರ್ಯ, ಕೆ.ಗುರುರಾಜಾಚಾರ್ಯ, ಕೆ.ಕೊಪ್ರೇಶಾಚಾರ್ಯ, ಎಂ.ಪಿ. ವಿಠ್ಠಲಾಚಾರ್ಯ, ಶ್ರೀಪಾದಾಚಾರ್ಯ ಜೋಷಿ ಅವರಿಗೆ ಶ್ರೀಮಠದಿಂದ ಪ್ರಮಾಣ ಪತ್ರ ಫಲಕವನ್ನು ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಶ್ರೀಮಠದ ಪ್ರಮುಖರಾದ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ, ಪಂ. ವಾದಿರಾಜಾಚಾರ್ಯ, ಸೂರೀಂದ್ರಾಚಾರ್ಯ ಸೇರಿದಂತೆ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.