ಅನುದಾನ ಹಂಚಿಕೆಯಲ್ಲಿ ಲೋಪ: ಕ್ರಿಮಿನಲ್ ಮೊಕದ್ದಮೆಗೆ ಶಿಫಾರಸು
ರಾಯಚೂರು: ಸ್ಥಳೀಯ ನಗರಸಭೆಯ ಶೇ. 22.75 ಅನುದಾನ ದುರುಪಯೋಗವಾದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನಗರಸಭೆಯ ಈ ಹಿಂದಿನ ಆಯುಕ್ತ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ-2 ಎನ್.ನರಸಿಂಹಮೂರ್ತಿ ಅವರು ಈ ಕುರಿತು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ರಾಯಚೂರು ನಗರಸಭೆಯ ಶೇ. 22.75ರ ಅನುದಾನದ ಬಳಕೆಯಲ್ಲಿ ಲೋಪ ಎಸಗಿದ ಈ ಹಿಂದಿನ ಪೌರಾಯುಕ್ತ ತಿಪ್ಪೇಶ್, ಎಇಇ ಮಲ್ಲಿಕಾರ್ಜುನ ಗೋಪಿಶೆಟ್ಟಿ, ಕಿರಿಯ ಎಂಜಿನಿಯರ್ ಸಂಗಮೇಶ್ ಮತ್ತಿತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ತಿಳಿಸಿದ್ದಾರೆ. ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ನೀಡಿದ ವರದಿಯಾಧರಿಸಿ ಶೇ. 22.75ರ ಅನುದಾನ ಬಿಡುಗಡೆಯಲ್ಲಿ ಅಧಿಕಾರಿಗಳು ಲೋಪ ಎಸಗಿರುವುದು ಕಂಡುಬಂದಿರುವುದರಿಂದ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅವರು ಸೂಚಿಸಿದ್ದು, ಕೈಗೊಂಡ ಕ್ರಮದ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ.