ಮಟ್ಟೂರು: ಕುಡಿವ ನೀರಿಗಾಗಿ ಪರದಾಟ
ಮುದಗಲ್: ಪಟ್ಟಣ ಸಮೀಪದ ಮಟ್ಟೂರು ಗ್ರಾಮದಲ್ಲಿ ಕುಡಿವ ನೀರಿಗಾಗಿ ಪರದಾಟ ಉಂಟಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಕುಡಿವ ನೀರಿನ ತೊಂದರೆಯನ್ನು ಅನುಭವಿಸುತ್ತಿರುವ ಗ್ರಾಮಸ್ಥರು ಹಲವಾರು ಬಾರಿ ಗ್ರಾಪಂಗೆ ಮತ್ತು ತಾಪಂ ಅಧಿಕಾರಿಗಳ ಹತ್ತಿರ ಮೊರೆ ಹೋದರೂ ಪ್ರಯೋಜನವಾಗಿಲ್ಲ. ಅಂತರ್ಜಲ ಕುಸಿತದಿಂದ ಕುಡಿವ ನೀರಿನ ಅಭಾವ ಎದುರಾಗಿದ್ದು ಒಂದೆಡೆಯಾದರೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನೀರಿನ ಅಭಾವ ಹೆಚ್ಚಾಗುವಂತೆ ಮಾಡಿದೆ.
ಕಾಯ್ದರೂ ಪ್ರಯೋಜನವಿಲ್ಲ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸುವುದಕ್ಕೆ ಮಿತಿಯೇ ಇಲ್ಲದಂತಾಗಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕೇಳಿದರೆ ಮೇಲಾಧಿಕಾರಿಗಳ ಆದೇಶವಿದೆ ಎಂದು ಜಾರಿಕೊಳ್ಳುತ್ತಿದ್ದಾರೆ. ಗಂಟೆಗಟ್ಟಲೇ ಕುಡಿವ ನೀರಿಗಾಗಿ ಸರದಿಯಲ್ಲಿ ಕಾದರೂ ಕೊಡ ನೀರು ಸಿಗದೇ ಬರಿಗೈಯಲ್ಲಿ ಹಿಂತಿರುಗುವ ಪ್ರಸಂಗಗಳು ಕೂಡ ಜರುಗಿವೆ ಎಂದು ಗ್ರಾಮದ ಮಹಿಳೆಯರು ಪತ್ರಿಕೆಗೆ ತಿಳಿಸಿದ್ದಾರೆ.
ದುರಸ್ಥಿ: ಗ್ರಾಮದಲ್ಲಿ 2 ಕೈ ಪಂಪ್‌ಗಳಿದ್ದು, ಪದೇಪದೇ ಕೆಟ್ಟು ಹೋಗುತ್ತಿವೆ. ಕೂಡಲೇ ಗ್ರಾ.ಪಂ. ಆಡಳಿತ ಮಂಡಳಿ ದುರಸ್ಥಿಗೆ ಮುಂದಾಗುತ್ತಿದ್ದರೂ, ಕೈ ಪಂಪ್‌ಗಳನ್ನು ಸರಿಯಾದ ರೀತಿಯಲ್ಲಿ ದುರಸ್ಥಿ ಮಾಡುವಲ್ಲಿ ವಿಫಲವಾಗಿದೆ ಎಂದು ಗ್ರಾಮದ ಬಸ್ಸಪ್ಪ ಅಮೀನಗಡ, ದೇವಪ್ಪ ಕುರುಕುಂದಿ, ಶರಣಬಸವ, ಅಯ್ಯಣ್ಣ ಜಾವೂರು, ರಮೇಶ್ ಆರೋಪಿಸಿದ್ದಾರೆ. ಕುಡಿವ ನೀರಿಗಾಗಿ ನಿತ್ಯ ಗ್ರಾಮದ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಖಾಸಗಿಯವರ ತೋಟ, ಗದ್ದೆಗಳಿಗೆ ತೆರಳಿ ಕುಡಿವ ನೀರಿನ ದಾಹವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಸರಕಾರ ಗ್ರಾ.ಪಂ. ಮೂಲಕ ಕುಡಿವ ನೀರಿಗಾಗಿ ಲಕ್ಷಂತರ ರು. ವ್ಯಯ ಮಾಡುತ್ತಿದ್ದರೂ ಸಮರ್ಪಕವಾಗಿ ಗ್ರಾ.ಪಂ. ಆಡಳಿತ ಮಂಡಳಿ ಕಾರ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.