ಶಾಸಕರಿಂದ ಬಹುಗ್ರಾಮ ಕುಡಿವ ನೀರಿನ ಯೋಜನೆ ಉದ್ಘಾಟನ
ಸಿಂಧನೂರು: ತಾಲೂಕಿನ ತುರ್ವಿಹಾಳ ಗ್ರಾಮದ ಹೊರವಲಯದಲ್ಲಿ ರಾಜೀವ್ಗಾಂಧಿ ಕುಡಿಯುವ ನೀರಿನ ಸಬ್ಮಿಷನ್ ಯೋಜನೆಯಡಿ ನಿರ್ಮಿಸಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶಾಸಕ ಪ್ರತಾಪಗೌಡ ಪಾಟೀಲ್ ಉದ್ಘಾಟಿಸಿದರು.
ನಂತರ ಏರ್ಪಡಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಇದು ಬೃಹತ್ ಯೋಜನೆಯಾಗಿದ್ದು ಸುತ್ತಮುತ್ತಲಿನ 33 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಿದೆ. 2008ರಲ್ಲಿ ಇಂತದೇ ನಾಲ್ಕು ಯೋಜನೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಯೋಜನೆ ಅನುಷ್ಠಾನಕ್ಕೆ ಸೂಕ್ತ ಭೂಮಿ ಲಭ್ಯವಾಗದ ಕಾರಣ ವಿಳಂಬವಾಗಿದೆ. ಕೂಡಲೇ ಆ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು. ಸಿಂಧನೂರು ಕುಷ್ಟಗಿ ಹೆದ್ದಾರಿ ದುರಸ್ತಿಗೆ 136 ಕೋಟಿ ಹಾಗೂ ಸಿಂಧನೂರು- ಲಿಂಗಸ್ಗೂರು ಹೆದ್ದಾರಿಗೆ 190 ಕೋಟಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶಾಸಕರಾಗಿ ತಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ತೃಪ್ತಿ ತಂದಿದೆ ಎಂದರು.
ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಸದಸ್ಯೆ ಬಸಮ್ಮ ಕುಂಟೋಜಿ ಮಾತನಾಡಿದರು.
ತಾಪಂ ಸದಸ್ಯರಾದ ಬಸಮ್ಮ ಗೌಡಶಾನಿ, ಎಇಇಬಿ ಆರ್. ಗೌಡೂರ, ದ್ಯಾಮನಗೌಡ ತಿಗೋಳ, ಶಾಮೀದ್ ಸಾಬ ಉಮಲೂಟಿ, ಹೇಮನಗೌಡ ಗುಂಜಳ್ಳಿ, ಗ್ರಾಪಂ ಅಧ್ಯಕ್ಷರಾದ ಆದಮ್ಮ, ಶಿವಮ್ಮ, ಕೆಂಪಮ್ಮ ತುರ್ವಿಹಾಳ, ವೆಂಕೋಬ ಬಪ್ಪೂರು, ಹುಲಿಗೆಮ್ಮ, ಚನ್ನಮ್ಮ, ವೀರೇಶಪ್ಪ, ಕಾಳಮ್ಮ, ಬಸಾಪುರ, ಎಪಿಎಂಸಿ ನಿರ್ದೇಶಕ ಫಾರುಖ್ ಸಾಬ, ಶರಣಪ್ಪ ತಿಡಿಗೋಳ, ಗುತ್ತಿಗೆದಾರ ಡಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.