ಸಹಾಯ ಧನ ವಿಳಂಬಕ್ಕೆ ಖಂಡನೆ: ದೇವದಾಸಿಯರ ಧರಣಿ
ರಾಯಚೂರು: ದೇವದಾಸಿಯರಿಗೆ ಬಾಕಿ ಸಹಾಯ ಧನ ಬಿಡುಗಡೆಗೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ನಗರದಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕಳೆದ 7 ತಿಂಗಳಿನಿಂದ ಜಿಲ್ಲೆಯಲ್ಲಿ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಕೊಡಮಾಡುವ ಸಹಾಯಧನ ಪಾವತಿಯಾಗಿಲ್ಲ. ಅದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
1ಸಾವಿರಕ್ಕೆ ಒತ್ತಾಯ: ದೇವದಾಸಿ ಪದ್ಧತಿಯಿಂದ ವಿಮೋಚನೆ ಹೊಂದಿರುವ ಮಹಿಳೆಯರಿಗೆ ಪ್ರತಿ ತಿಂಗಳು 400 ಸಹಾಯ ಧನ ನೀಡಲಾಗುತ್ತಿದೆ. ಈ ಮೊತ್ತ ಜೀವನ ನಿರ್ವಹಣೆಗೆ ಸಾಲದು. ಈ ಹಿನ್ನೆಲೆಯ್ಲಲಿ ರಾಜ್ಯ ಸರ್ಕಾರ ಈ ಮೊತ್ತವನ್ನು 1ಸಾವಿರಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.
ಮಾಸಿಕ ಸಹಾಯ ಧನ ಆಯಾ ತಿಂಗಳು ಪಾವತಿ ಮಾಡಬೇಕು. ಆದರೆ ಕಳೆದ ಕೆಲ ತಿಂಗಳಿನಿಂದ ಸಹಾಯ ಧನ ಪಾವತಿ ಮಾಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕಳೆದ 7 ತಿಂಗಳಿನಿಂದ ಸಹಾಯಧನ ಪಾವತಿಯಾಗಿಲ್ಲ.
ಸರ್ಕಾರ ಈಗಾಗಲೇ ಸಹಾಯ ಧನವನ್ನು ಏಪ್ರಿಲ್-2013ರಿಂದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲು ನಿರ್ಧರಿಸಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಕನಿಷ್ಟ 1ಸಾವಿರ ಠೇವಣಿ ಇರಿಸುವುದು ಕಡ್ಡಾಯಗೊಳಿಸಿರುವುದು ಖಾತೆ ತೆರೆಯಲು ಅಡಚಣೆಯುಂಟು ಮಾಡಿದೆ ಎಂದು ದೂರಿದರು.
ಸಾಲ ಮನ್ನಾ: ಕೆಲ ಬ್ಯಾಂಕ್ಗಳಲ್ಲಿ ದೇವದಾಸಿ ಮಹಿಳೆಯರು ಪಡೆದ ಸಾಲದ ಕಂತುಗಳನ್ನು ಸರ್ಕಾರ ನೀಡುತ್ತಿರುವ ಸಹಾಯ ಧನದಲ್ಲಿಯೇ ಕಡಿತಗೊಳಿಸುತ್ತಿವೆ. ಅದರಿಂದಾಗಿ ದೇವದಾಸಿ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ರೀತಿಯಲ್ಲಿ ದೇವದಾಸಿ ಮಹಿಳೆಯರು ಪಡೆದ ಸಾಲವನ್ನೂ ಮನ್ನಾ ಮಾಡುವಂತೆ ಒತ್ತಾಯಿಸಿದರು.
ದೇವದಾಸಿ ಮಹಿಳೆಯರಿಗೆ ಅಂತ್ಯೋದಯ ಪಡಿತರ ಚೀಟಿ ನೀಡುವಂತೆ ಅನೇಕ ಬಾರಿ ಹೋರಾಟ ಮಾಡಿದ್ದರ ಫಲವಾಗಿ ದೇವದಾಸಿ ಪುನಾವಸತಿ ನಿಗಮದಿಂದ ಸಮೀಕ್ಷೆ ನಡೆಸಿ ಈ ಕುರಿತು ವರದಿಯನ್ನು ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ನೀಡಲಾಗಿದೆ. ಆದರೆ ಇಲಾಖೆಯು ಕಳೆದೊಂದೂವರೆ ವರ್ಷದಿಂದ ದೇವದಾಸಿ ಮಹಿಳೆಯರಿಗೆ ಪಡಿತರ ಚೀಟಿ ವಿತರಿಸಿಲ್ಲ ಎಂದು ದೂರಿದರು.
ನಿವೇಶನ ನೀಡಿ: ಕೂಡಲೇ ಆಹಾರ ಇಲಾಖೆಗೆ ಜಿಲ್ಲಾಡಳಿತ ನಿರ್ದೇಶನ ನೀಡಿ ದೇವದಾಸಿ ಮಹಿಳೆಯರಿಗೆ ನೀಡಿರುವ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುಗಳನ್ನು ಹಿಂಪಡೆದು ಅಂತ್ಯೋದಯ ಪಡಿತರ ಚೀಟಿಗಳನ್ನು ನೀಡಬೇಕು. ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ದೇವದಾಸಿ ಮಹಿಳೆಯರಿಗೆ ಸರ್ಕಾರವೇ ಜಾಗೆ ಖರೀದಿಸಿ ನಿವೇಶನ ನೀಡಬೇಕೆಂದು ಆಗ್ರಹಿಸಿದರು.
ರಾಯಚೂರು ನಗರಸಭೆ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ 60ಜನ ದೇವದಾಸಿ ಮಹಿಳೆಯರ ಪಿತ್ರಾರ್ಜಿತ ಆಸ್ತಿಯನ್ನು ಮಹಿಳೆಯರ ಹೆಸರಿಗೆ ವರ್ಗಾಯಿಸಲು ಕೋರಿ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಅಧಿಕಾರಿಗಳು ವರ್ಗಾಯಿಸಿಲ್ಲ. ಈ ಹಿನ್ನೆಲೆ ಕೂಡಲೇ ದೇವದಾಸಿ ಮಹಿಳೆಯರಿಗೆ ಆಸ್ತಿ ವರ್ಗಾವಣೆ ಮಾಡಿಕೊಡುವಂತೆ ಒತ್ತಾಯಿಸಿದರು.
ಧರಣಿಯಲ್ಲಿ ಸಂಘಟನೆಯ ಪ್ರಮುಖರಾದ ಕೆ.ಜಿ.ವೀರೇಶ್, ಮಲ್ಲಯ್ಯ ಜಾಲಹಳ್ಳಿ, ಎಚ್.ಪದ್ಮಾ, ಈರಮ್ಮ, ಸಂತೋಷಮ್ಮ, ಸೀತಾ, ಕಮಲಮ್ಮ, ಹುಲಿಗೆಮ್ಮ ಮುದಗಲ್, ಮರಿಯಮ್ಮ, ನರಸಿಂಹಪ್ಪ, ಯಲ್ಲಪ್ಪ ಗಚ್ಚಿನಮನೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.