ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಮಾಲಿ ದರ ಹೆಚ್ಚಳಕ್ಕೆ ಎಪಿಎಂಸಿ ಹಮಾಲರ ಆಗ್ರಹ

Lingaraj Badiger
Updated On : 19 Mar 2013, 11:05 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು ಮಾ.18
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಮಾಲಿ ದರ ಹೆಚ್ಚಿಸುವಂತೆ ಆಗ್ರಹಿಸಿ ಕುಪ್ಪಿಭೀಮರಾಯ ಎಪಿಎಂಸಿ ಹಮಾಲರ ಸಂಘದ ನೇತೃತ್ವದಲ್ಲಿ ಹಮಾಲರು ಪ್ರತಿಭಟನೆ ನಡೆಸಿ, ಎಪಿಎಂಸಿ ಕಾರ್ಯದರ್ಶಿ ಭೀಮಣ್ಣ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಎಪಿಎಂಸಿಯಲ್ಲಿ ಸೋಮವಾರ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಹಮಾಲರು, ನೆಲ್ಲು ಒಣಗಿಸಿ ತೂಕ ಮಾಡಿ ಬಾಂಬೆ ನಿಟ್ಟಿಗೆ ಸಾಗಿಸಿದರೆ 20, ನೆಲ್ಲು ಚಾಕಿ ಮಾಡಿ ಲೋಡ್ ಮಾಡಿದರೆ 25, ಶೇಂಗಾ ಮತ್ತು ಸೂರ್ಯಕಾಂತಿ(ಪ್ರತಿ ಚೀಲಕ್ಕೆ) 12, ಶೇಂಗಾ ಚಾಕಿ ಮಾಡಿ ಲೋಡ್ ಮಾಡಿದರೆ 20, ಸೂರ್ಯಕಾಂತಿ ಚಾಕಿ ತೂಕ ಮಾಡಿ ಲೋಡ್ ಮಾಡಿದರೆ 25, ಜೋಳ ಹಾಗೂ ಎಲ್ಲ ಗಟ್ಟಿಕಾಳು(100 ಕೆಜಿ) ಸಾಣಗೆ ಮತ್ತು ಲೋಡ್ ಮಾಡಿದರೆ 25, ಶೇಂಗಾ ಲೋಡ್ ಮಾಡಿದರೆ 5 ಮತ್ತು ಅನ್‌ಲೋಡ್ ಮಾಡಿದರೆ 6, ಸೂರ್ಯಕಾಂತಿ ಅನ್‌ಲೋಡ್ ಮಾಡಿದರೆ 6, ಗಟ್ಟಿಕಾಳು(1 ಕ್ವಿಂ.) ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡಿದರೆ 10, ಬತ್ತ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡಿದರೆ 10 ಕೊಡಬೇಕು.
ಗಡುವಿಗೆ ಕ್ಯಾರೆ ಎಂದಿಲ್ಲ: ಒಂದು ಸ್ಥಳೀಯ ಲಾರಿಗೆ (1 ಟನ್ ಎಂಟ್ರಿಗೆ) 40 ಹಾಗೂ ಹೊರಗಿನ ಲಾರಿಗೆ 50. ಅಂಗಡಿಯಿಂದ ಅನ್‌ಲೋಡ್ ಮಾಡಿದರೆ 30 ಹಮಾಲಿ ನಿಗದಿ ಮಾಡಬೇಕು. ಅಲ್ಲದೆ ಎಪಿಎಂಸಿಯಲ್ಲಿ ಬೆ.10ರಿಂದ 8ರವರೆಗೆ ಮಾತ್ರ ಕೆಲಸ ಮಾಡಲಾಗುತ್ತದೆ. ರೈತರ ಮಾಲು ಹೊರತುಪಡಿಸಿ ಯಾವುದೇ ಡಿಲಿವರಿ ಲೋಡಿಂಗ್ ಇದ್ದರೆ ಮಾಡುವುದಿಲ್ಲವೆಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಮಾ.5ರಿಂದ 12 ರವರೆಗೆ ಗಡುವು ನೀಡಲಾಗಿತ್ತು.
ಮುಷ್ಕರದ ಎಚ್ಚರಿಕೆ: ಆದರೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಎಪಿಎಂಸಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಅಧಿಕಾರಿಗಳ ಸಭೆ ಕರೆದು ಬೇಡಿಕೆಗಳ ಈಡೇರಿಸುವ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಷ್ಕರ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಪರಸಪ್ಪ ಹವಾಲ್ದಾರ್, ಉಪಾಧ್ಯಕ್ಷ ಗ್ಯಾನಪ್ಪ ಕರಡಕಲ್, ಕಾರ್ಯದರ್ಶಿ ಮಹಿಬೂಬಸಾಬ ಭಾಗವಾನ, ಪ್ರಧಾನ ಕಾರ್ಯದರ್ಶಿ ಮಲ್ಲೇಶ ರಾಠೋಡ, ಖಜಾಂಚಿ ಮಲ್ಲಪ್ಪ ವಗ್ಗರ್, ಹಮಾಲರಾದ ಹನುಮಂತ, ಅಯ್ಯಾಳಪ್ಪ, ಯಂಕಪ್ಪ, ನಾಗರಾಜ, ರವಿ, ಹುಲಗಪ್ಪ, ಸಣ್ಣ ಹುಲ್ಲಪ್ಪ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement