ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ನಗರಸಭಾ ಸದಸ್ಯರುಜನಪರ ಕೆಲಸ ಮಾಡಲಿ'

Mainashree
Updated On : 20 Mar 2013, 11:52 am

ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.19
ನಗರಸಭೆಗೆ ಆಯ್ಕೆಯಾಗಿರುವ ನೂತನ ನಗರಸಭಾ ಸದಸ್ಯರು ಜನಮೆಚ್ಚುವ ಕೆಲಸ ಮಾಡಲಿ. ಜನರ ವಿಶ್ವಾಸ ಗಳಿಸಲಿ ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ರಾಮಕೃಷ್ಣಾಚಾರ್ ಗೋನವಾರ ಹೇಳಿದರು.
ಅವರು ಬ್ರಾಹ್ಮಣರ ಓಣಿಯಲ್ಲಿ ನೂತನ ನಗರಸಭೆ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜನರ ಸಮಸ್ಯೆಗಳಿಗೆ ತತ್ಕ್ಷಣ ಸ್ಪಂದಿಸುವ ಗುಣವನ್ನು ಜನಪ್ರತಿನಿಧಿಗಳು ಬೆಳೆಸಿಕೊಳ್ಳಬೇಕು. ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದಾಗ ಮಾತ್ರ ಜನ ಅವರನ್ನು ಗೌರವಿಸುತ್ತಾರೆ. ಈ ಹಿನ್ನೆಲೆಯಲ್ಲಿ ನೂತನ ನಗರಸಭೆ ಸದಸ್ಯರು ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು.
ಸಹಕಾರ ಅಗತ್ಯ: ಉಪ್ಪಾರವಾಡಿಯಿಂದ ಆಯ್ಕೆಯಾಗಿರುವ ನಗರಸಭಾ ಸದಸ್ಯ ಕೆ.ಮರಿಯಪ್ಪ ಸನ್ಮಾನ ಸ್ವೀಕರಿಸಿ, ಬೇಸಿಗೆಯಲ್ಲಿ ಉಂಟಾಗುವ ನೀರಿನ ಕ್ಷಾಮವನ್ನು ತಪ್ಪಿಸುವ ಬಗ್ಗೆ ನಗರಸಭೆಯ ಪ್ರಥಮ ಸಭೆಯಲ್ಲಿ ಚರ್ಚಿಸುತ್ತೇನೆ. ಇನ್ನೊಂದು ಶುದ್ಧೀಕರಣ ಘಟಕವನ್ನು ಆರಂಭಿಸುವ ಕುರಿತು ಪ್ರಸ್ತಾಪಿಸುತ್ತೇನೆ. ಯಾವುದೇ ಕಾರಣಕ್ಕೂ ನಗರದ ಜನತೆಗೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಆಡಳಿತ ಮಂಡಳಿ ಸಹಕರಿಸಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಸನ್ಮಾನಿತರಾದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ ಮಾತನಾಡಿ, ಸನ್ಮಾನಗಳು ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ. ಸನ್ಮಾನಗಳಿಗೆ ತಕ್ಕಂತೆ ಸನ್ಮಾನಿತರು ಅವರವರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ಸಮಾಜದ ಲೋಪದೋಷಗಳನ್ನು ಎತ್ತಿ ತೋರಿಸಿದಾಗ ಅವುಗಳನ್ನು ಆರೋಗ್ಯಪೂರ್ಣವಾಗಿ ಸ್ವೀಕರಿಸುವ ಮನೋಭಾವನೆಯನ್ನು ಜನಪ್ರತಿನಿಧಿಗಳು ಹೊಂದಬೇಕು ಎಂದರು.
ಭರವಸೆ: ಸನ್ಮಾನಿತಗೊಂಡ ನೂತನ ನಗರಸಭಾ ಸದಸ್ಯರಾದ ವೆಂಕಟರಾವ್ ಬಂಡಿ ವಕೀಲರು, ಶರಣಯ್ಯಸ್ವಾಮಿ ಹೊಕ್ರಾಣಿ ಮಾತನಾಡಿ ಜನರ ನಾಡಿ ಮಿಡಿತಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ತಾಲೂಕು ವಿಪ್ರ ನೌಕರರ ಸಂಘದ ಅಧ್ಯಕ್ಷ ಪಾಂಡುರಂಗರಾವ್ ದೇಸಾಯಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ ಮಾತನಾಡಿ, ಕೆ.ಮರಿಯಪ್ಪ ಅವರ ಆಯ್ಕೆ, ಕಾರ್ಯಕ್ಷಮತೆ ಬಗ್ಗೆ ಮಾತನಾಡಿದರು. ಗಜಾನನ ಹವ್ಯಾಸ ಯುವಕ ಮಂಡಳಿ ಅಧ್ಯಕ್ಷ ವಿಶ್ವನಾಥ ಕಲ್ಲೂರು ಪಾಲ್ಗೊಂಡಿದ್ದರು. ಪ್ರಭಾಕರ ಕುಲಕರ್ಣಿ, ರಾಮರಾವ್ ಕಂಬಳಾವತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement