ಸಂಗೀತ ಪ್ರಿಯ ಶ್ರೀರಾಯರಿಗೆ ನಾದಹಾರಂ ಸಮರ್ಪಣೆ
ರಾಯಚೂರು: ಮಂತ್ರಾಲಯ ಶ್ರೀಮಠದಲ್ಲಿ ಮಂಗಳವಾರ ವಾದ್ಯಸಂಗೀತದ ಝೇಂಕಾರ. ಪುರಂದರರು, ತ್ಯಾಗರಾಜರು ಮತ್ತು ಅನ್ನಮಾಚಾರ್ಯರ ಸಂಕೀರ್ತನೆಗಳ ನಾದಲಹರಿ. ಸಂಗೀತದ ಮೂಲಕ ರಾಯರಿಗೆ ನಾದಹಾರಂ ಸಮರ್ಪಣೆಯ ಕ್ಷಣವದು.ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ 418ನೇ ವರ್ಧಂತಿ ಮಹೋತ್ಸವದ ಸಂದರ್ಭ ಮಂಗಳವಾರ ಕಂಡುಬಂದ ದೃಶ್ಯವಿದು.ಚೆನ್ನೈನ ಹನುಮಂತಪುರಂ ಪಲ್ಲಕ್ಕಿ ಸೇವಾ ಟ್ರಸ್ಟ್ನಿಂದ ಆಯೋಜಿಸಿದ್ದ ನಾದಹಾರಂ ಶ್ರೀರಾಯರ ವರ್ಧಂತಿ ಮಹೋತ್ಸವಕ್ಕೆ ಸಂಭ್ರಮದ ಮೆರುಗು ತಂದಿತ್ತು. ನೂರಾರು ಸಂಗೀತಗಾರರು ಏಕಕಾಲಕ್ಕೆ ಸಂಕೀರ್ತನೆಗಳನ್ನು ಸಮರ್ಪಿಸುತ್ತಿದ್ದರೆ ಎಂಥವರಲ್ಲೂ ಭಕ್ತಿ ಭಾವದ ಪುಳಕ.
ಏನಿದು ನಾದಹಾರಂ?: ಚೆನ್ನೈನ 450ಕ್ಕೂ ಹೆಚ್ಚಿನ ಸಂಖ್ಯೆಯ ವಿವಿಧ ವಾದ್ಯಗಾರರು, ಹಾಡುಗಾರರ ನಡೆಸಿಕೊಡುವ ಕಾರ್ಯಕ್ರಮವೇ ನಾದಹಾರಂ. ಶ್ರೀರಾಘವೇಂದ್ರತೀರ್ಥರು ಸ್ವತ ವೀಣೆ ನುಡಿಸುತ್ತಿದ್ದರು ಎಂಬುದು ಗ್ರಂಥಗಳಲ್ಲಿ ಹೇಳಲಾಗಿದೆ. ಹೀಗಾಗಿ ರಾಯರಿಗೆ ಸಂಗೀತ ಸೇವೆಯೂ ಅಷ್ಟೇ ಪ್ರೀತಿ ಎಂಬುದು ಸರ್ವವಿದಿತ.ಹೀಗಾಗಿ ಚೆನ್ನೈನ ಹನುಮಂತಪುರಂ ಪಲ್ಲಕ್ಕಿ ಸೇವಾ ಟ್ರಸ್ಟ್ ವತಿಯಿಂದ ಶ್ರೀರಾಘವೇಂದ್ರಸ್ವಾಮಿಗಳ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ನಾದರಾಹಂ ಸಮರ್ಪಣೆ ಕಳೆದ 9 ವರ್ಷಗಳಿಂದ ನಿರಂತರವಾಗಿ ಸಾಗಿ ಬಂದಿದೆ. ನಾದಹಾರಂ ಕಾರ್ಯಕ್ರಮವು ಸಿತಾರ್, ವೀಣೆ, ಮೃದಂಗಂ, ಘಟಂ, ಮೋರ್ಚಿಂಗ್, ಕೊಳಲು, ಸ್ಯಾಕ್ಸೋಫೋನ್, ಪರ್ಕುಶನ್ ಪ್ಯಾಡ್ ಸೇರಿದಂತೆ ವಿವಿಧ ತಾಳವಾದ್ಯಗಳನ್ನು ನುಡಿಸುವವರು ಹಾಗೂ ಹಾಡುಗಾರರ ದೊಡ್ಡ ತಂಡವೇ ಆಗಿದೆ.ಕೃತಿ ಪ್ರಸ್ತುತಿ: 450 ಜನರಿರುವ ಈ ತಂಡದಲ್ಲಿ ವಾದ್ಯಗಾರರು ಹಾಗೂ ಹಾಡುಗಾರರು ಸಮನ್ವಯದೊಂದಿಗೆ ಏಕಕಾಲಕ್ಕೆ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವುದು ವಿಶೇಷ. ಅದರಂತೆಯೇ ಮಂತ್ರಾಲಯದಲ್ಲಿ ಮಂಗಳವಾರ ನಡೆದ ನಾದಹಾರಂ ಮೊದಲಿಗೆ ತ್ಯಾಗರಾಜರ, ಅನ್ನಮಾಚಾರ್ಯರ ಕೃತಿ ಪ್ರಸ್ತುತಪಡಿಸಲಾಯಿತು. ಆನಂತರದಲ್ಲಿ ಪುರಂದರ ದಾಸರ ಕೀರ್ತನೆಗಳನ್ನು ನೂರಾರು ಹಾಡುಗಾರರು ಲಯ, ತಾಳ ತಪ್ಪದಂತೆ ಪ್ರಸ್ತುತಪಡಿಸುವ ಮೂಲಕ ಭಕ್ತರ ಮನಸೂರೆಗೊಂಡರು.