ಸವಲತ್ತು ಸಫಲತೆಗೆ ಜನರ ಸಹಕಾರ ಅಗತ್ಯ
ಮುದಗಲ್: ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಸರಕಾರ ಸಾಕಷ್ಟು ಯೋಜನೆಗಳನ್ನ ಜಾರಿಗೆ ತರಲಾಗಿದ್ದು ಅವುಗಳು ಸಫಲವಾಗಬೇಕಾದರೆ ಸಾರ್ವಜನಿಕರ ಸಹಾಕಾರ ಮುಖ್ಯವಾಗಿರುತ್ತದೆ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಕಾಮಗಾರಿ ಕಾರ್ಯ: ಸಮೀಪದ ಮಟ್ಟೂರು ತಾಂಡದ ಹತ್ತಿರ ನೂತನವಾಗಿ ನಿರ್ಮಿಸಲಾದ ಪ್ರತಾಪಗೌಡ ಕಾಲೋನಿಯ ಗುಂಪು ಮನೆಗಳ ಉದ್ಘಾಟನೆ ಹಾಗೂ ಪೈಗಂಬರ ನಗರದ ಫಲಾನುಭವಿಗಳಿಗೆ ಆಶ್ರಯ ನಿವೇಶನ ಹಕ್ಕು ಪತ್ರ ಸೋಮವಾರ ವಿತರಿಸಿ ಮಾತನಾಡಿದರು. ಮೂರು ತಾಲೂಕಿನ ಹಳ್ಳಿಗಳು ಮಸ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ಬರುತ್ತಿದ್ದು, ಸುಮಾರು 30ಕ್ಕೂ ಹೆಚ್ಚು ಬಂಜಾರ ತಾಂಡಗಳ ಅಭಿವೃದ್ಧಿಗಾಗಿ ಎರಡು ಕೋಟಿ ರುಪಾಯಿ ಖರ್ಚು ಮಾಡಿ ಸಿಸಿ ರಸ್ತೆ, ಕುಡಿವ ನೀರು, ಸಮುದಾಯ ಭವನ ಸೇರಿದಂತೆ ನಾನಾ ಕಾಮಗಾರಿಗಳನ್ನು ಮಾಡಲಾಗಿದೆ. ಅಲ್ಲದೆ ಪ.ಜಾತಿ ಹಾಗೂ ಪ.ಪಂಗಡದ ಅಭಿವೃದ್ಧಿಗಾಗಿ ಗಮನ ಹರಿಸಿ, ಪ್ರತಿಯೊಂದು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿಯೇ ಹಲವಾರು ಕುಡಿವ ನೀರಿನ ಯೋಜನೆಗಳಲ್ಲಿ ಅತಿ ಹೆಚ್ಚು ಅನುಧಾನವನ್ನು ಪಡೆದು, ಪ್ರತಿಗ್ರಾಮಕ್ಕೂ ಶಾಶ್ವತ ಕುಡಿವ ನೀರಿನ ಸೌಕರ್ಯ ಕಲ್ಪಿಸಿದ್ದು ದಾಖಲೆಯಾಗಿದೆ.ಮನೆಗಳ ವಿತರಣೆ: ಅಲ್ಲದೆ ಆಶ್ರಯ ಯೋಜನೆ ಅಡಿಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ಬಡ ಫಲಾನುಭವಿಗಳಿಗೆ, ವಿತರಿಸಿದ್ದು ಜಿಲ್ಲೆಯಲ್ಲಿಯೇ ವಿಶೇಷವಾಗಿದೆ.
ರಸ್ತೆ ದುರಸ್ತಿ: ಸುವರ್ಣ ಗ್ರಾಮ, ಜಿಪಂ ಹಾಗೂ ಪಿಡಬ್ಲೂಡಿ ಸೇರಿದಂತೆ ಮುಂತಾದ ಇಲಾಖೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕಿಮೀ ರಸ್ತೆಯನ್ನ ದುರಸ್ತಿಗೊಳಿಸಲಾಗಿದೆ. ಆದರೆ ಇಷ್ಟಾದರೂ ಇನ್ನೂ ಹಿಂದುಳಿದ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೊರತೆ ಉಳಿದಿದೆ. ಮುಂದಿನ ದಿನಗಳಲ್ಲಿ ಜನರು ಆಶೀರ್ವಾದ ನೀಡಿದರೆ, ಕ್ಷೇತ್ರವನ್ನು ಸಮೃದ್ಧಿಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಶಿವಶರಣಪ್ಪ ಇತ್ಲಿ, ಬಜಾರ ಸಮಾಜದ ಮುಖಂಡ ಎಲ್.ಟಿ. ನಾಯ್ಕ್ ಮಾತನಾಡಿದರು.
ವೇದಿಕೆಯಲ್ಲಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಪಂಪಣ್ಣ ಜಾವೂರು, ಚನ್ನಬಸನಗೌಡ, ಗ್ರಾ ಪಂ ಪಿಡಿಒ ರವೀಂದ್ರ,ಶರಣಪ್ಪ ಹುಲ್ಲೂರು, ಬಸವಂತಪ್ಪ ಹಸ್ಮಕಲ್, ವೀರೇಶ ಬುದ್ದಿನ್ನಿ, ಕನ್ನಾಳ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಮಲ್ಲಿಕಾರ್ಜುನ ಚುಕನಹಟ್ಟಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.