ಎಪಿಎಂಸಿ ಸೆಕ್ಯುರಿಟಿ ಗಾರ್ಡ್ ವೇತನದಲ್ಲಿ ಗೋಲ್ಮಾಲ್?
ಕ.ಪ್ರ. ವಾರ್ತೆ, ಸಿಂಧನೂರು, ಮಾ.20
ನಗರದ ಎಪಿಎಂಸಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಸಕ್ಯೂರಿಟಿ ಗಾರ್ಡ್ಗಳ ಏಜೆನ್ಸಿಯನ್ನು ನಿರ್ವಹಿಸುತ್ತಿರುವ ಗುತ್ತೇದಾರರು ಸೆಕ್ಯುರಿಟಿ ಗಾರ್ಡ್ಗಳ ವೇತನ ಹಂಚಿಕೆಯಲ್ಲಿ ಭಾರಿ ಅಕ್ರಮವೆಸಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸೆಕ್ಯುರಿಟಿ ಏಜೆನ್ಸಿ ಪಡೆದಿರುವ ವ್ಯಕ್ತಿಯೊಬ್ಬರು ಗಾರ್ಡ್ಗಳಿಗೆ ಹಾಗೂ ಕ್ಲೀನಿಂಗ್ ಕೆಲಸ ಮಾಡುವವರಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಸಂಬಳ ನೀಡದೆ ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದಾರೆ. ರಾಜ್ಯದ ಸುಮಾರು 10ಕ್ಕೂ ಹೆಚ್ಚು ಎಪಿಎಂಸಿಗಳಲ್ಲಿ ಸೆಕ್ಯುರಿಟಿ ಏಜೆನ್ಸಿಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಎಲ್ಲ ಕಡೆ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಆಯಾ ಎಪಿಎಂಸಿ ಕಾರ್ಯದರ್ಶಿಗಳೊಂದಿಗೆ 'ಲೇನಾ-ದೇನಾ'ವನ್ನು ಚೆನ್ನಾಗಿ ಇಟ್ಟುಕೊಂಡಿದ್ದರಿಂದ ಎಲ್ಲಿಯೂ ಇವರು ತಿಂದ ವಾಸನೆ ಸಿಗದಂತೆ ಪಾರಾಗುತ್ತಿದ್ದಾರೆ ಎಂದು ಅವರ ಆಪ್ತರೇ ಹೇಳುತ್ತಾರೆ.
ನಿಯಮ ಪಾಲಿಸುತ್ತಿಲ್ಲ: ಪ್ರಸ್ತುತ ಸಿಂಧನೂರು ಎಪಿಎಂಸಿಯಲ್ಲಿ 29ಕ್ಕೂ ಹೆಚ್ಚು ಸೆಕ್ಯುರಿಟಿ ಗಾರ್ಡ್, ಕ್ಲೀನಿಂಗ್ ಕೆಲಸದಲ್ಲಿ 20ಕ್ಕೂ ಜನರಿದ್ದಾರೆ. ಪ್ರತಿ ತಿಂಗಳ ಸರ್ಕಾರದಿಂದ ಸೆಕ್ಯುರಿಟಿಗಾರ್ಡ್ಗಳಿಗೆ 2 ಲಕ್ಷ ಸಂಬಳ ನೀಡಲು ಸರ್ಕಾರದಿಂದ ಬರುತ್ತದೆ. ಎಪಿಎಂಸಿ ನಿರ್ದೇಶಕರ ಆದೇಶದ ಪ್ರಕಾರ- ಸೆಕ್ಯುರಿಟಿ ಗಾರ್ಡ್ಗಳಿಗೆ ಚೆಕ್ಗಳ ಮೂಲಕ ಸಂಬಳ ಬಟವಾಟೆ ಮಾಡಬೇಕೆಂಬುದು ನಿಯಮವಿದೆ. ಆದರೆ ಇದನ್ನು ಪಾಲಿಸದೆ ಹೆದರಿಸಿದವರಿಗೆ ಮಾತ್ರ ಸಂಬಳ ಕೊಟ್ಟು ಉಳಿದವರಿಗೆ ತನ್ನ ಮನಸ್ಸಿಗೆ ತೋಚಿದಂತೆ ಸಂಬಳ ಕೊಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಸೆಕ್ಯುರಿಟಿ ಗಾರ್ಡ್ವೊಬ್ಬರು 'ಕನ್ನಡಪ್ರಭ' ತಿಳಿಸಿದರು.
ಬೇನಾಮಿ ಹೆಸರಲ್ಲಿ ಸಂಬಳ ಲೂಟಿ?: ಎಪಿಎಂಸಿಯಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ಗೆ 5 ಸಾವಿರ ತಿಂಗಳಿಗೆ ಕೊಟ್ಟರೆ, ಜೀಪ್ ಡ್ರೈವರ್ಗೆ 4 ಸಾವಿರ, ಕೆಲವರಿಗೆ 3 ಸಾವಿರ ಕೊಡುತ್ತಾರೆ. ಗುಡದೂರು, ತುರ್ವಿಹಾಳ ಚೆಕ್ಪೋಸ್ಟ್ಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ಕೇವಲ 800 ಸಂಬಳ ಕೊಡುತ್ತಾರೆ. ಅಲ್ಲದೆ ಪ್ರತಿ ತಿಂಗಳು ಕೆಲ ಬೇನಾಮಿ ಹೆಸರುಗಳಲ್ಲಿ ಸಂಬಳದ ಹಣ ಎತ್ತಿ ಹಾಕುತ್ತಿರುವುದು ತಿಳಿದುಬಂದಿದೆ.
29 ಸೆಕ್ಯುರಿಟಿ ಗಾರ್ಡ್ಗಳ ಪೈಕಿ ಎಪಿಎಂಸಿ ಗೇಟ್ ಚೆಕ್ಪೋಸ್ಟ್ನಲ್ಲಿ ಇಬ್ಬರು, ಗುಡದೂರು, ತುರ್ವಿಹಾಳ, ರಾಯಚೂರು ರಸ್ತೆ, ದಢೇಸೂಗೂರು ಚೆಕ್ಪೋಸ್ಟ್ಗಳಲ್ಲಿ ತಲಾ ಇಬ್ಬರು, ಹಂಚಿನಾಳ ಕ್ಯಾಂಪ್ ಚೆಕ್ಪೋಸ್ಟ್ನಲ್ಲಿ ಮೂವರು ಗಾರ್ಡ್ಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲದೆ ಏಳು ಜನ ಎಪಿಎಂಸಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಗುತ್ತೇದಾರರ ಕಿರುಕುಳ, ನಿಗದಿತ ಸಮಯಕ್ಕೆ ಸಂಬಳ ನೀಡದಿರುವುದರಿಂದ ನೊಂದು ಮದ್ಯವ್ಯಸನಿಗಳಿಗಳಾಗಿ ಅಲೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಎಪಿಎಂಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಕರಿಯಪ್ಪ ಹರೇಟನೂರ ಅವರು ಈ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ನೊಂದವರು ಹಾಗೂ ಹೆಸರು ಹೇಳಲಿಚ್ಛಿಸದ ಕೆಲ ಸಿಬ್ಬಂದಿ ಒತ್ತಾಯಿಸಿದ್ದಾರೆ.