ಎರಡು ಕಡೆ ಹೆಸರು ನೋಂದಣಿ; ನಿರ್ದಾಕ್ಷಿಣ್ಯ ಕ್ರಮ
ಕ.ಪ್ರ. ವಾರ್ತೆ, ಸಿಂಧನೂರು, ಮಾ.20
ಗ್ರಾಮಾಂತರ ಮತ್ತು ನಗರ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿದ ವ್ಯಕ್ತಿಗಳ ಮೇಲೆ ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಜರುಗಿದ ನಗರಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲು ನೋಟಿಸ್, ಆಮೇಲೆ ಕೇಸ್: ಎರಡು ಅಥವಾ ಮೂರು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದವರ ಮೇಲೆ ಕ್ರಮದ ಸ್ವರೂಪವೇನು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಾರಂಭದಲ್ಲಿ ಒಂದೇ ಕಡೆ ಹೆಸರು ನೋಂದಾಯಿಸುವಂತೆ ನೋಟಿಸ್ ನೀಡಲಾಗುವುದು. ಅದಕ್ಕೆ ಸ್ಪಂದಿಸದಿದ್ರೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಹಿಂಜರಿಯುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಲ್ಲಿ ಲೋಪದೋಷ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ವಿರೂಪಾಕ್ಷಪ್ಪ ಮನವಿ ಸಲ್ಲಿಕೆ: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೇರಿದಂತೆ ಬಿಎಸ್ಸಾರ್ ಕಾಂಗ್ರೆಸ್ ಮುಖಂಡರಾದ ಕೆ.ಕರಿಯಪ್ಪ, ರಂಗನಗೌಡ ಗೊರೇಬಾಳ, ಮೈನುದ್ದೀನ್ ಎತ್ಮಾರಿ, ಹಂಪಯ್ಯಸ್ವಾಮಿ ರಾವಿಹಾಳ ಮತ್ತಿತರರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಅನಧಿಕೃತವಾಗಿ ಮತದಾರರನ್ನು ಹೆಸರನ್ನು ಸೇರ್ಪಡೆ ಮಾಡಿದ್ದಾರೆ. ಮತದಾರರ ಮನೆಯೂ ಇಲ್ಲ, ಯಾವುದೇ ಆಸ್ತಿಯೂ ಇಲ್ಲ, ಅಲ್ಲದೇ ಗ್ರಾಮಾಂತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಂತಹ ಹೆಸರುಗಳನ್ನು ರದ್ದುಪಡಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಎರಡು ಅಥವಾ ಹೆಚ್ಚು ಕಡೆ ಮತದಾರರ ಪಟ್ಟಯಲ್ಲಿ ಹೆಸರು ಇದ್ದವರ ವಿವರಗಳನ್ನು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಲಿಂಗಸ್ಗೂರು ಸಹಾಯಕ ಆಯುಕ್ತ ಟಿ.ಯೋಗೇಶ, ತಹಸೀಲ್ದಾರ್ ನಿಂಗನಗೌಡ ಇದ್ದರು.