ಕಾಯಲೇಬೇಕು...
ವಿಶೇಷ ವರದಿ
ಕ.ಪ್ರ. ವಾರ್ತೆ, ರಾಯಚೂರು, ಮಾ.20
ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಣೆ ನಿರೀಕ್ಷೆಯಲ್ಲಿದ್ದ ರಾಜಕೀಯ ಪಕ್ಷಗಳಿಗೆ ಈಗ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ. ಚುನಾವಣೆ ಆಯೋಗವು ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಪ್ರಕಟಿಸುವುದರೊಂದಿಗೆ ನೀತಿ ಸಂಹಿತೆ ಜಾರಿಯಾಗಿದೆ. ಪರಿಣಾಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿ ಮುಂದಕ್ಕೆ ಹೋಗಿದೆ. ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿದ್ದ ಪಕ್ಷಗಳು ಮೂರು ತಿಂಗಳು ಕಾಯುವುದು ಅನಿವಾರ್ಯವಾಗಿದೆ.
ಜಿಲ್ಲೆಯ ಎರಡು ನಗರಸಭೆ, ಮೂರು, ಪುರಸಭೆಗಳು ಹಾಗೂ ಒಂದು ಸ್ಥಳೀಯ ಸಂಸ್ಥೆಗೆ ಮಾ.7ರಂದು ಚುನಾವಣೆ ನಡೆದಿತ್ತು. ಮಾ.11ರಂದು ಮತಗಳ ಎಣಿಕೆಯ ನಂತರದಲ್ಲಿ ಸಿಂಧನೂರು, ದೇವದುರ್ಗ ಹೊರತುಪಡಿಸಿ ರಾಯಚೂರು ನಗರಸಭೆ, ಮಾನವಿ ಪುರಸಭೆ, ಲಿಂಗಸ್ಗೂರು ಪುರಸಭೆ ಹಾಗೂ ಮುದಗಲ್ ಪಟ್ಟಣ ಪಂಚಾಯ್ತಿಯಲ್ಲಿ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ದೊರೆತಿರಲಿಲ್ಲ.
ಲೆಕ್ಕಾಚಾರ ಬುಡಮೇಲು: ಹೀಗೆ ಅತಂತ್ರ ಸ್ಥಿತಿಗೆ ಸಿಲುಕಿದ ನಗರಸಭೆ ಮತ್ತು ಪುರಸಭೆ ಹಾಗೂ ಪಪಂ.ಗಳಲ್ಲಿ ಅಧಿಕಾರಕ್ಕೇರಲು ವಿವಿಧ ರಾಜಕೀಯ ಪಕ್ಷಗಳು ಪಕ್ಷೇತರರ ಬೆಂಬಲ ಪಡೆಯಲು ಇನ್ನಿಲ್ಲದ ಪ್ರಯತ್ನದಲ್ಲಿದ್ದವು. ಜತೆಗೆ ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿ ಬಗ್ಗೆಯೇ ಲೆಕ್ಕಾಚಾರದಲ್ಲಿ ತೊಡಗಿದ್ದವು.
ವಿವಿಧ ರಾಜಕೀಯ ಪಕ್ಷಗಳು ಸರ್ಕಾರದ ಮೇಲೆ ಮೀಸಲಾತಿ ನಿಗದಿಗೆ ಸಂಬಂಧಿಸಿ ಪ್ರಭಾವ ಬೀರುವ ಕಾರ್ಯವನ್ನೂ ಮಾಡಿದ್ದವು. ಆದರೆ ದಿಢೀರ್ ಆಗಿ ಸದ್ಯ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ನೀತಿ ಸಂಹಿತೆಯೂ ಜಾರಿಗೆ ಬಂದಿದೆ.
ಅನಿವಾರ್ಯ ಪರಿಸ್ಥಿತಿ: ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದ ವಿವಿಧ ರಾಜಕೀಯ ಪಕ್ಷಗಳು, ಈಗ ಕೇಂದ್ರ ಚುನಾವಣೆ ಆಯೋಗ ದಿಢೀರ್ ಆಗಿ ರಾಜ್ಯ ವಿಧಾನಸಭೆ ದಿನಾಂಕ ಪ್ರಕಟಿಸಿದ್ದು, ಗೊಂದಲಕ್ಕೆ ಬೀಳಿಸಿದೆ. ಅಷ್ಟೇ ಅಲ್ಲ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯನ್ನು ಇಷ್ಟಕ್ಕೆ ಕೈಬಿಟ್ಟು ವಿಧಾನಸಭೆ ಚುನಾವಣೆಗೆ ಸಜ್ಜಾಗುವ ಅನಿವಾರ್ಯತೆ ಎದುರಾಗಿದೆ.
ಕಳೆದ ಬಾರಿ ರಾಜ್ಯ ವಿಧಾನಸಭೆಗೆ ಚುನಾವಣೆ ಅಭ್ಯರ್ಥಿಗಳ ಹುಡುಕಾಟ, ಕಾರ್ಯಕರ್ತರ ಸಂಘಟನೆ ಸೇರಿದಂತೆ ವಿವಿಧ ಹಂತದ ಸಿದ್ಧತೆಯಲ್ಲಿದ್ದಾಗಲೇ ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಗಳು ಎದುರಾಗಿದ್ದವು. ಆಗಲೂ ರಾಜಕೀಯ ಪಕ್ಷಗಳು ಗೊಂದಲಕ್ಕೆ ಬಿದ್ದಿದ್ದವು.
ಈ ಬಾರಿ ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಣೆಯ ನಿರೀಕ್ಷೆಯಲ್ಲಿದ್ದ ರಾಜಕೀಯ ಪಕ್ಷಗಳನ್ನು ಕೇಂದ್ರ ಚುನಾವಣೆ ಆಯೋಗವು ರಾಜ್ಯ ವಿಧಾನಸಭೆಯ ಚುನಾವಣೆ ದಿನ ನಿಗದಿ ಮಾಡುವ ಮೂಲಕ ಗೊಂದಲಕ್ಕೆ ಬೀಳಿಸಿದೆ.
ಹೀಗಾಗಿ ನಗರ ಮತ್ತು ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದ್ದ ವಿವಿಧ ರಾಜಕೀಯ ಪಕ್ಷಗಳು ಈಗ ವಿಧಾನಸಭೆ ಚುನಾವಣೆಗೆ ಸಜ್ಜಾಗಬೇಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.