ನಾಗಲಾಪುರ: ಕುಡಿವ ನೀರಿಗೆ ಆಗ್ರಹಿಸಿ ಗ್ರಾಪಂಗೆ ಮುತ್ತಿಗೆ
ಮುದಗಲ್: ಪಟ್ಟಣ ಸಮೀಪದ ನಾಗಲಾಪುರ ಗ್ರಾಪಂಗೆ ಖಾಲಿ ಕೊಡಗಳೊಂದಿಗೆ ತಮಟೆ ಬಾರಿಸುತ್ತ ಹೈ.ಕ ವಿಮೋಚನ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕುಡಿಯಲು ಸರಿಯಾಗಿ ನೀರು ಸಿಗದೆ 3 ತಿಂಗಳಿಂದ ಪರದಾಡುತಿದ್ದ ನಾಗಲಾಪುರ ಗ್ರಾಪಂ ವ್ಯಾಪ್ತಿಯ ವ್ಯಾಕರನಾಳ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಅಕ್ರಮ ನಳಗಳು ಹೆಚ್ಚಾಗಿವೆ. ಇದರಿಂದಾಗಿ ಗ್ರಾಮದ ದಲಿತರ ಓಣಿಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಕುಡಿವ ನೀರು ಸರಬರಾಜು ಪೈಪ್ಲೈನ್ ಸರಿಯಾಗಿ ಜೋಡಿಸದೆ ಎಲ್ಲೆಂದರಲ್ಲಿ ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳು ನಳಗಳನ್ನು ಪಡೆದಿದ್ದಾರೆ.
ಅಲ್ಲದೆ ಮೋಟಾರು ಅಳವಡಿಸಿ ನೀರು ತುಂಬುತ್ತಿರುವುದರಿಂದ ಕೊನೆ ಭಾಗದ ಕೇರಿಗೆ ನೀರು ಬರುತ್ತಿಲ್ಲ. ಈ ಬಗ್ಗೆ ಪಂಚಾಯತಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಕೂಡಲೇ ಪರಿಹಾರ ಕಲ್ಪಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.
ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಡಿಒ ಶಂಕ್ರಪ್ಪ ಗ್ರಾಮದಲ್ಲಿರುವ ಅಕ್ರಮ ನಳಗಳ ಪಟ್ಟಿ ಮಾಡಲಾಗಿದೆ. ಎರಡು ದಿನಗಳಲ್ಲಿ ಎಲ್ಲಾ ಅಕ್ರಮ ನಳಗಳನ್ನು ತೆರವುಗೊಳಿಸಿ ಕುಡಿವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವುದಾಗಿ ಲಿಖಿತ ಭರವಸೆ ನೀಡಿದರು. ಅಲ್ಲದೆ ಒಂದು ವೇಳೆ ಅಕ್ರಮ ನಳಗಳನ್ನು ತೆರವುಗೊಳಿಸಿ ಸೂಕ್ತ ವ್ಯವಸ್ತೆ ಕಲ್ಪಿಸದಿದ್ದರೆ ಪ್ರತ್ಯೇಕ ಬೋರ್ವೆಲ್ ಕೊರೆಸಿ ಕುಡಿವ ನೀರಿನ ಸೌಕರ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಬಿಗಿಪಟ್ಟು ಹಿಡಿದರು.
ಇದಕ್ಕೆ ಪಿಡಿಒ ಒಪ್ಪಿಗೆ ಸೂಚಿಸಿ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಹೈ-ಕ ವಿಮೋಚನ ವೇದಿಕೆ ತಾಲೂಕು ಸಂಯೋಜಕ ಶರಣಪ್ಪ ಗುಡಿಹಾಳ, ಗ್ರಾಮ ಘಟಕದ ಅಧ್ಯಕ್ಷ ವೀರೇಶ, ಕರಿಯಪ್ಪ, ಅಮರಮ್ಮ, ಗ್ರಾಮಸ್ಥರಾದ ಸೀತಮ್ಮ, ಬಸಪ್ಪ ಗುಡಿಹಾಳ ಇದ್ದರು.