ಮುಸ್ಲಿಂ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಿಡಿ: ಪರಿಷತ್
ಕ.ಪ್ರ. ವಾರ್ತೆ, ರಾಯಚೂರು, ಮಾ.20
ಸ್ಥಳೀಯ ನಗರಸಭೆ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ಒಮ್ಮೆಯೂ ದೊರೆತಿಲ್ಲ. ಈ ಬಾರಿಯಾದರೂ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯದವರಿಗೆ ನೀಡಬೇಕೆಂದು ಜನಸಂಗ್ರಾಮ ಪರಿಷತ್ ಮುಖಂಡ ರಜಾಕ್ ಉಸ್ತಾದ್ ಒತ್ತಾಯಿಸಿದರು.
ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ನಗರಸಭೆಯಲ್ಲಿ ಇದುವರೆಗೆ ಬೇರೆ ಬೇರೆ ಜನಾಂಗದವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಆದರೆ ಎಲ್ಲ ರಾಜಕೀಯ ಪಕ್ಷಗಳು ಮುಸ್ಲಿಂರನ್ನು ಮತ ಬ್ಯಾಂಕ್ ಆಗಿ ಪರಿಗಣಿಸಿ ನಂತರ ಉನ್ನತ ಹುದ್ದೆಗಳನ್ನು ನೀಡಲು ಮರೆತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಸದ್ಯ ಬೇರೆ ಜಾತಿ ಜನಾಂಗದವರಿಗೆ ಮೀಸಲು ಮಾಡಿ ಆದೇಶ ಹೊರಡಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಅನೇಕ ರೀತಿಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಒತ್ತಡ ಹೇರುವ ಕಾರ್ಯ ಜಾರಿಯಲ್ಲಿದ್ದು, ಮುಸ್ಲಿಂ ಜನಾಂಗದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುವಂತೆ ಅವರು ಮನವಿ ಮಾಡಿದರು.
ಶೀಘ್ರದಲ್ಲೇ ಎಲ್ಲ ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಜನಸಂಗ್ರಾಮ ಪರಿಷತ್‌ನಿಂದ ಮುಸ್ಲಿಂ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಕೋರಿ ಮನವಿ ಸಲ್ಲಿಸಲಾಗುತ್ತದೆ. ಮುಸ್ಲಿಂ ಸಮಾಜದವರು ಸ್ಥಳೀಯ ನಗರಸಭೆಗೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರು ರಾಜಕೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.
ಸಂಘಟನೆಯ ಪ್ರಮುಖರಾದ ಉಸ್ಮಾನ್, ಅಕ್ಬರ್, ವೆಂಕಟೇಶ್ ಯಾದವ್ ಸೇರಿದಂತೆ ಅನೇಕರಿದ್ದರು.