ವಲಸೆ ತಡೆಯಿರಿ, ಕುಡಿವ ನೀರಿನ ಸಮಸ್ಯೆ ನಿವಾರಿಸಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.20
ಕೂಲಿ ಕಾರ್ಮಿಕರ ವಲಸೆ ತಡೆಗೆ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನ ಹಾಗೂ ಅನುದಾನದ ಪೂರ್ಣ ಬಳಕೆ, ಭೀಕರ ಬರ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಹೊಣೆಯಾಗಿದೆ. ಅದೇ ರೀತಿ ಚುನಾವಣೆ ಕಾರ್ಯ ಸಮರ್ಥವಾಗಿ ನಿರ್ವಹಿಸಬೇಕು. ತಪ್ಪಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಪಂ ಉಪಕಾರ್ಯದರ್ಶಿ ಮಹ್ಮದ್ ಯುಸೂಫ್ ಎಚ್ಚರಿಸಿದರು.
ಅವರು ನಗರದಲ್ಲಿ ಬುಧವಾರ ಜಿಪಂ ಸಭಾಂಗಣದಲ್ಲಿ ಕರೆದಿದ್ದ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಿಂದ ಭೀಕರ ಬರ ಹಿನ್ನೆಲೆ ದಿನವೂ ನೂರಾರು ಸಂಖ್ಯೆಯ ಕೂಲಿ ಕಾರ್ಮಿಕರು ಗುಳೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಪಂನಲ್ಲಿ ಲಭ್ಯವಿರುವ ಖಾತ್ರಿ ಯೋಜನೆ ಅನುದಾನದ ಬಳಕೆ ನಿಟ್ಟಿನಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕೆಂದು ಸೂಚಿಸಿದರು.
ಕೂಲಿ ಪಾವತಿಸಿ: ಕೂಲಿಕಾರ್ಮಿಕರ ವಲಸೆ ತಡೆಗೆ ಕೂಡಲೇ ಕಾರ್ಯಪ್ರವೃತ್ತರಾಗಲು ಆದೇಶಿಸಿದ ಅವರು, ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಮೂರು ನಾಲ್ಕು ದಿನಗಳಲ್ಲಿಯೇ ಕೆಲಸ ನೀಡುವ ಕಾರ್ಯ ಪಿಡಿಒ ಗಳು ಮಾಡಬೇಕು. ಅದೇ ರೀತಿ ಕೂಲಿ ಮೊತ್ತವನ್ನು ಬಾಕಿ ಉಳಿಸಿಕೊಳ್ಳದೇ ಕೂಡಲೇ ಪಾವತಿಸುವಂತೆ ಸೂಚಿಸಿದರು. ಗ್ರಾಪಂ ಪಿಡಿಒಗಳ ಅಸಮರ್ಪಕ ಕಾರ್ಯ ನಿರ್ವಹಣೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದೆ. ಅದರಿಂದ ಜಿಲ್ಲಾಡಳಿತಕ್ಕೆ ಮುಜುಗರ ಉಂಟಾಗಿದೆ. ಜಿಪಂ ಆಡಳಿತದಿಂದ ಗ್ರಾಪಂ ಪಿಡಿಒಗಳಿಗೆ ವಾಕಿಟಾಕಿ ನೀಡಲಾಗಿದೆ. ಪ್ರತ್ಯೇಕ ಸಿಮ್ ಕಾರ್ಡಗಳನ್ನೂ ಒದಗಿಸಲಾಗಿದೆ. ಆದರೆ ಪಿಡಿಒಗಳು ಮಾತ್ರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಮೇಲಧಿಕಾರಿಗಳಿಗೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಡಚಣೆಯಾಗಿದೆ. ಇದೇ ರೀತಿಯ ವರ್ತನೆ ಮುಂದುವರಿದಲ್ಲಿ ಕಠಿಣ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.
ಪ್ರಸ್ತಾವನೆ: ಉದ್ಯೋಗ ಖಾತ್ರಿ ಯೋಜನೆಗೆ ಎರಡನೇ ಕಂತಿನ ಅನುದಾನ ರು. 9ಕೋಟಿ ಸರ್ಕಾರದಿಂದ ಬಂದಿದೆ. ಇದುವರೆಗೆ ಈ ಯೋಜನೆ ಅಡಿ ರು. 67.61 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರು. 46.89 ಕೋಟಿ ಪಾವತಿಸಲಾಗಿದೆ. ರು. 20 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಭೀಕರ ಬರ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ಈಗಾಗಲೇ ಲಿಂಗಸ್ಗೂರು ತಾಲೂಕಿನ 4 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಮುಂದಿನ ಮೂರು ತಿಂಗಳಿನಲ್ಲಿ 100ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರೊದಗಿಸುವ ಪರಿಸ್ಥಿತಿ ನಿರ್ಮಾಣವಾಗುವ ಅಂದಾಜಿದೆ ಎಂದು ಹೇಳಿದರು.
ಜಿಲ್ಲಾಡಳಿತದ ಬಳಿ ನೀರಿನ ಸಮಸ್ಯೆ ನಿರ್ವಹಣೆಗೆ ಅಗತ್ಯ ಅನುದಾನ ಲಭ್ಯವಿದ್ದು, 13ನೇ ಹಣಕಾಸು ಯೋಜನೆ ಅಡಿಯ ಅನುದಾನವನ್ನೂ ನೀರಿನ ಕಾಮಗಾರಿಗಳಿಗೆ ಬಳಸಲು ಅವರು ಸೂಚಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಗ್ರಾಪಂ ಪಿಡಿಒ ಗಳ ಮೇಲೆ ಸಮಸ್ಯೆ ನಿರ್ವಹಣೆಯ ಹಾಗೂ ಪರಿಹಾರ ಕಾರ್ಯದ ಹೊಣೆಗಾರಿಕೆಯಿದೆ. ಈ ಕೆಲಸ ನಿರ್ವಹಿಸಲು ಸಾಧ್ಯವಾಗದವರು ಕೂಡಲೇ ಕೆಲಸಕ್ಕೆ ರಾಜೀನಾಮೆ ನೀಡಿ ತೆರಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುನ್ನಚ್ಚರಿಕೆ: ರಾಜ್ಯ ವಿಧಾನಸಭೆಗೆ ಮುಂದಿನ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದು, ಆ ಕಾರ್ಯವನ್ನು ಗ್ರಾಪಂ ಮಟ್ಟದಲ್ಲಿ ಪಿಡಿಒ ಗಳು ಸಮರ್ಪಕವಾಗಿ ನಿಭಾಯಿಸಬೇಕಿದೆ. ಗ್ರಾಮ ಮಟ್ಟದಲ್ಲಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆಗೆ ಗಮನಹರಿಸುವುದು. ಅಕ್ರಮಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸುವುದು ಗ್ರಾಪಂ ಪಿಡಿಒಗಳಿಗೆ ವಹಿಸಲಾಗುತ್ತಿದ್ದು, ಈ ಎಲ್ಲ ಜವಾಬ್ದಾರಿಗಳನ್ನು ಪಿಡಿಒಗಳು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಗೆ ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಆರಂಭಿಸಲಾಗಿದ್ದು, ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಪ್ರಚಾರ ಕೈಗೊಳ್ಳಬೇಕು. ಉದ್ಯೋಗ ಖಾತ್ರಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯ ವಿವರಗಳನ್ನು ಗ್ರಾಮಗಳಲ್ಲಿ ಗೋಡೆಬರೆಹಗಳ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಬೇಕೆಂದು ಪಿಡಿಒ ಗಳಿಗೆ ಸೂಚಿಸಿದರು.
ಮೊತ್ತ ಹೆಚ್ಚಳ: ಜಿಪಂ ಉದ್ಯೋಗ ಖಾತ್ರಿ ಯೋಜನಾ ನಿರ್ದೇಶಕ ಶರಣಬಸವರಾಜ್ ಮಾತನಾಡಿ, ಕೂಲಿ ಮೊತ್ತವನ್ನು ಬರುವ ಏಪ್ರಿಲ್ನಿಂದಲೇ ರು. 174 ಹೆಚ್ಚಿಸಲಾಗಿದೆ. ಸರ್ಕಾರದಿಂದ ಈ ಬಗ್ಗೆ ಆದೇಶ ಹೊರಬಿದ್ದಿದ್ದು, ಕೂಲಿ ಹಣವನ್ನು ಮುಂದಿನ ದಿನಗಳಲ್ಲಿ ನೇರವಾಗಿ ಕೂಲಿಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದೂ ಸಭೆಗೆ ವಿವರಿಸಿದರು. ನಂತರ ತಾಪಂ ಇಒಗಳು ಹಾಗೂ ಗ್ರಾಪಂ ಪಿಡಿಒಗಳು ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದರು. ಜಿಲ್ಲೆಯ 164 ಗ್ರಾಪಂ ಗಳ ಪಿಡಿಒ ಗಳು, ತಾಪಂ ಕಾರ್ಯನಿರ್ವಾಹಕಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.