ವಿವಿಧ ಬೇಡಿಕೆ: ವಿಮಾ ಪ್ರತಿನಿಧಿಗಳ ಪ್ರತಿಭಟನೆ
ರಾಯಚೂರು: ವಿಮಾ ಕಾನೂನು ತಿದ್ದುಪಡಿ 2008ರ ಪ್ರಸ್ತಾವನೆ ವಾಪಸಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಮಾ ಏಜೆಂಟರ ಸಂಘದ ಕಾರ್ಯಕರ್ತರು ಬುಧವಾರ ನಗರದ ಎಲ್ಐಸಿ ಶಾಖಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಉದ್ದೇಶಿಸಿರುವ 2008ರ ವಿಮಾ ಕಾಯಿದೆ ತಿದ್ದುಪಡಿ ಪ್ರಸ್ತಾವನೆ ಕೂಡಲೇ ವಾಪಸು ಪಡೆಯಬೇಕು. ಪಾಲಿಸಿದಾರರ ಪ್ರೀಮಿಯಂ ಮೇಲಿನ ಸೇವಾ ತೆರಿಗೆ ವಿಧಿಸುವುದನ್ನು ಕೈಬಿಡಬೇಕು. ಪಾಲಿಸಿದಾರರು ತೆಗೆದುಕೊಂಡ ಪಾಲಿಸಿ ಮೇಲಿನ ಸಾಲ ಭರ್ತಿಗೆ ಕಡ್ಡಾಯವಾಗಿ ಚೆಕ್ ಅಥವಾ ಡಿಡಿ ನೀಡುವ ಪದ್ಧತಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಹೊಸದಾಗಿ ಬಿಡುಗಡೆಯಾಗುವ ಎಲ್ಲ ಏಕ ಕಂತಿನ ಪ್ರೀಮಿಯಂನ ಪಾಲಿಸಿಗಳಿಗೆ ಷೇರು ಮಾರುಕಟ್ಟೆಗೆ ಹೂಡಬಹುದು. ಕಮಿಷನ್ ದರ ಪ್ರತಿ ಪಾಲಿಸಿಗೆ ಶೇ. 5ಕ್ಕಿಂತ ಕಡಿಮೆಯಿರದಂತೆ ನೀಡಬೇಕು. ವಿಮಾ ಪ್ರತಿನಿಧಿಗಳ ಕಮಿಷನ್ ದರ ಬದಲಾವಣೆ ಕಡಿಮೆ ಮಾಡದೇ ಬೆಲೆ ಏರಿಕೆ ಅನುಗುಣವಾಗಿ ಹೆಚ್ಚಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ವಿಭಾಗೀಯ ಅಧ್ಯಕ್ಷ ವೈ.ಈರಣ್ಣ, ಉಪಾಧ್ಯಕ್ಷ ಎಂ.ರಮೇಶ್, ಸಹ ಕಾರ್ಯದರ್ಶಿ ಶಿವರಾಜ್ ಸೇರಿ ಅನೇಕರಿದ್ದರು.