ಸಂಕ್ಷಿಪ್ತ ಸುದ್ದಿ
1ನೇ ಘಟಕ ಕಾರ್ಯಾರಂಭ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 1ನೇ ಘಟಕ ಪುನಾ ಕಾರ್ಯಾರಂಭ ಮಾಡಿದೆ. 4ನೇ ಘಟಕವು ಬುಧವಾರ ರಾತ್ರಿ ವೇಳೆಗೆ ವಿದ್ಯುತ್ ಉತ್ಪಾದನೆಗೆ ತೊಡಗಲಿದೆ ಎಂದು ಆರ್‌ಟಿಪಿಎಸ್ ಮೂಲಗಳು ಹೇಳಿವೆ. ವಿದ್ಯುತ್ ಕೇಂದ್ರ ಈ ಎರಡೂ ಘಟಕಗಳು ಮಂಗಳವಾರವಷ್ಟೇ ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದವು. ಕೆಪಿಸಿ ಅಧಿಕಾರಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡು ಎರಡೂ ಘಟಕಗಳನ್ನು ಉತ್ಪಾದನೆಗೆ ಸಜ್ಜುಗೊಳಿಸಿದ್ದು, ಬುಧವಾರ ಬೆಳಗ್ಗೆಯೇ 1ನೇ ಘಟಕವನ್ನು ವಿದ್ಯುತ್ ಉತ್ಪಾದನೆಗೆ ತೊಡಗಿಸಲಾಯಿತು. 4ನೇ ಘಟಕವನ್ನು ಬುಧವಾರ ರಾತ್ರಿ ಹೊತ್ತಿಗೆ ವಿದ್ಯುತ್ ಉತ್ಪಾದನೆಗೆ ತೊಡಗಿಸಲು ಕೆಪಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ಹೇಳಿವೆ. ಸದ್ಯ 1, 2, 3, 5,6 ಮತ್ತು 7ನೇ ಘಟಕಗಳಿಂದ ಬುಧವಾರ ಬೆಳಗ್ಗೆವರೆಗೆ ಒಟ್ಟು 18.98 ಮಿಲಿಯನ್ ಯೂನಿಟ್ ವಿದ್ಯುತ್ ರಾಜ್ಯ ಜಾಲಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು, 8ನೇ ಘಟಕವು ಇಎಸ್ ಪಿ ಕುಸಿತದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. 8ನೇ ಘಟಕದ ಪುನಾರಂಭ ಕಾರ್ಯ ಇನ್ನಷ್ಟು ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾ ಬಲೆಗೆ
ರಾಯಚೂರು: ತಾಲೂಕಿನ ಇಡಪನೂರು ಗ್ರಾಮದ ಗ್ರಾಮ ಲೆಕ್ಕಿಗನೊಬ್ಬ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬುಧವಾರ ಸಂಜೆ ಬಿದ್ದಿದ್ದಾನೆ. ಗ್ರಾಮ ಲೆಕ್ಕಿಗ ಯಲ್ಲಪ್ಪ ಎಂಬಾತ ನರಸಪ್ಪ ಎಂಬುವವರಿಂದ ಆಸ್ತಿ ವರ್ಗಾವಣೆಗೆ 1 ಸಾವಿರ ಲಂಚ ಕೇಳಿದ್ದು, ನಗರದ ಡಿಡಿಪಿಐ ಕಚೇರಿ ಎದುರಿನ ಬಾರ್ ನಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.