ಆರ್‌ಟಿಪಿಎಸ್ 8ನೇ ಘಟಕ ಕಾರ್ಯಾರಂಭ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.21
ಇಎಸ್‌ಪಿ ವಿಭಾಗದ ಕುಸಿತದಿಂದ ದುರಸ್ತಿಗೀಡಾಗಿದ್ದ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8ನೇ ಘಟಕವನ್ನು ಪುನಃ ವಿದ್ಯುತ್ ಉತ್ಪಾದನೆಗೆ ಗುರುವಾರ ಬೆಳಗ್ಗೆಯಿಂದ ತೊಡಗಿಸಲಾಗಿದೆ. ಆದರೆ ಘಟಕದಿಂದ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ನಿರೀಕ್ಷಿಸುವಂತಿಲ್ಲ.
ಕಳೆದ ಫೆ.16ರಂದು ರಾತ್ರಿ ಹಾರುಬೂದಿ ಸಾಗಣೆಯ ಇಎಸ್‌ಪಿ ವಿಭಾಗದ ಕುಸಿತದಿಂದ ಸಂಭವಿಸಿದ ಅವಘಡದಿಂದಾಗಿ ಈ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಅವಘಡದಿಂದಾಗಿ ಹಾರುಬೂದಿ ನಿರ್ವಹಣೆಯ ಒಟ್ಟು ನಾಲ್ಕು ಮಾರ್ಗಗಳ ಪೈಕಿ ಎರಡು ಮಾರ್ಗಗಳು ಸಂಪೂರ್ಣ ಹಾನಿಗೀಡಾಗಿದ್ದವು. ಅದರಿಂದಾಗಿ ವಿದ್ಯುತ್ ಉತ್ಪಾದನೆ ಅಸಾಧ್ಯ ಎಂಬ ಮಾತು ಕೇಳಿಬಂದಿತ್ತು. ಆದರೆ ಆಗ ಕೆಪಿಸಿ ತಾಂತ್ರಿಕ ನಿರ್ದೇಶಕರಾಗಿದ್ದ ನಾರಾಯಣಪ್ರಸಾದ್ ಮತ್ತು ಬಿಎಚ್‌ಇಎಲ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ನಂತರ ವಿದ್ಯುತ್ ಉತ್ಪಾದನೆ ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ 15 ದಿನಗಳಲ್ಲಿಯೇ ವಿದ್ಯುತ್ ಉತ್ಪಾದನೆಗೆ ತೊಡಗಿಸುವುದಾಗಿ ಕೆಪಿಸಿ ತಿಳಿಸಿತ್ತು.
ಆದರೆ 8ನೇ ಘಟಕದ ಇಎಸ್‌ಪಿ ವಿಭಾಗದ ಹಾರುಬೂದಿ ಸಾಗಣೆ ಮಾರ್ಗಗಳ ಪೈಕಿ ಎರಡು ಮಾರ್ಗಗಳಲ್ಲಿ ಸಿಲುಕಿದ್ದ ಅಪಾರ ಬೂದಿ ಮತ್ತು ಕುಸಿದ ಭಾಗದ ಅವಶೇಷ ತೆರವಿಗೆ ಕನಿಷ್ಠ 20 ದಿನಗಳ ಸಮಯ ಹಿಡಿದಿದೆ. ಹೀಗಾಗಿ ಒಂದು ತಿಂಗಳ ನಂತರವೇ 8ನೇ ಘಟಕವು ಕಾರ್ಯಾರಂಭ ಮಾಡಿದೆ. ಸದ್ಯ 8ನೇ ಘಟಕದ ಹಾರುಬೂದಿ ಸಾಗಣೆ ವ್ಯವಸ್ಥೆಯನ್ನು ಅವಘಡದ ನಂತರ ಉಳಿದಿರುವ ಎರಡು ಮಾರ್ಗಗಳನ್ನು ಅವಲಂಬಿಸಿ ವಿದ್ಯುತ್ ಉತ್ಪಾದಿಸುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಕೇವಲ 100ರಿಂದ 150 ಮೆವ್ಯಾವರೆಗೆ ಮಾತ್ರ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೇಸಿಗೆಯ ದಿನಗಳಲ್ಲಿ ಬಿಸಿಲ ತಾಪ ಏರಿಕೆ ಕಂಡಂತೆ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತಲೇ ಸಾಗುತ್ತಿದೆ. ಅದರಿಂದಾಗಿ ಶಕ್ತಿನಗರದ ವಿದ್ಯುತ್ ಕೇಂದ್ರದಲ್ಲಿರುವ ಎಲ್ಲ 8 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದು ಅಧಿಕಾರಿಗಳ ಉದ್ದೇಶ. ಕಳೆದ ಎರಡು ದಿನಗಳ ಹಿಂದಷ್ಟೇ ವಿದ್ಯುತ್ ಕೇಂದ್ರದ 1 ಮತ್ತು 4ನೇ ಘಟಕಗಳು ದುರಸ್ತಿಗೀಡಾಗಿ ಆಂತಕ ಸೃಷ್ಟಿಸಿದ್ದವು. ಆದರೆ ಕೆಪಿಸಿ ಅಧಿಕಾರಿಗಳು ಆ ಎರಡೂ ಘಟಕಗಳನ್ನೂ ತುರ್ತಾಗಿ ದುರಸ್ತಿಗೊಳಿಸಿ ವಿದ್ಯುತ್ ಉತ್ಪಾದನೆ ಆರಂಭಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ 8ನೇ ಘಟಕದಲ್ಲಿಯೂ ತಕ್ಕಮಟ್ಟಿಗೆ ವಿದ್ಯುತ್ ಉತ್ಪಾದನೆಗೆ ಮುಂದಾಗಿರುವುದು ವಿದ್ಯುತ್ ಅಭಾವವನ್ನು ಕೊಂಚಮಟ್ಟಿಗೆ ತಗ್ಗಿಸಲಿದೆ ಎಂಬ ವಿಶ್ವಾಸ ಕೆಪಿಸಿಯದ್ದಾಗಿದೆ. ಈ ಮಧ್ಯೆ ವಿದ್ಯುತ್ ಕೇಂದ್ರದಿಂದ ಗುರುವಾರ ಬೆಳಗ್ಗೆವರೆಗೆ 23 ಮಿಲಿಯನ್ ಯುನಿಟ್ ವಿದ್ಯುತ್ ರಾಜ್ಯ ಜಾಲಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.