ಕುಡಿವ ನೀರಿಗೆ ಪರದಾಟ
ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ ಮುದಗಲ್ ಮಾ.21
ಬೇಸಿಗೆ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದೆ. ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ ಆರಂಭವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಅಭಾವ ನೀಗಿಸಬೇಕಾದ ತಾಲೂಕ ಆಡಳಿತ ಸ್ಕೇರ್ಸಿಟಿ ಕ್ರಿಯಾ ಯೋಜನೆ ಮಾಡಿ ಕೈ ತೊಳೆದುಕೊಂಡಿದೆ. ಮುದಗಲ್ ಸುತ್ತಮುತ್ತಲಿನ ಗ್ರಾಮಗಳಾದ ಕನಸಾವಿ, ಆದಾಪುರ, ಆಮದಿಹಾಳ ಜನತಾಪುರ, ನಾಗಲಾಪುರ, ಮಟ್ಟೂರು, ಆರ್ಯಭೋಗಾಪುರ, ಗುಡಿಹಾಳ ಸೇರಿದಂತೆ ಇನ್ನು ಆನೇಕ ಗ್ರಾಮಗಳಲ್ಲಿ ಕುಡಿಯುವ ನೀರು ಯೋಜನೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇದ್ದುದರಿಂದ ಜನತೆ ನೀರಿಗಾಗಿ ತೋಟ, ಗದ್ದೆಗಳಿಗೆ ಅಲೆದಾಡುವ ಸ್ಥಿತಿ ಬಂದಿದೆ.
ದುಸ್ಥಿತಿ: ಕನಸಾವಿ ಗ್ರಾಮದಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ. ಗ್ರಾಮದಲ್ಲಿರುವ ಐತಿಹಾಸಿಕ ಬಾವಿಯಲ್ಲಿ ನೀರು ಖಾಲಿಯಾಗಿದ್ದರಿಂದ ಗ್ರಾಮಸ್ಥರು ಸುಮಾರು 120 ಮೆಟ್ಟಿಲಿರುವ ಆಳದ ಬಾವಿಯಿಂದ ನೀರು ತರಬೇಕಾದ ದುಸ್ಥಿತಿ ಬಂದಿದೆ. ಗ್ರಾಮದಲ್ಲಿರುವ ಕಿರು ನೀರು ಸರಬರಾಜು ಯೋಜನೆಯ ಕೊಳವೆ ಭಾವಿಯಲ್ಲಿ ಅಂತರ್ಜಲ ಕುಸಿದಿದೆ. ಇರುವ ಒಂದು ಯೋಜನೆಯಿಂದ ಗ್ರಾಮದ ಜನರಿಗೆ ನೀರು ಸಾಲುತ್ತಿಲ್ಲ.
ಗ್ರಾಮದಲ್ಲಿ ಎಲ್ಲೇ ಕೊಳವೇ ಭಾವಿ ಕೊರೆಸಿದರೂ, ನೀರು ಸಿಗುತ್ತಿಲ್ಲ. ಕರೆಂಟ್ ಇದ್ದರೆ ಅತಿ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತದೆ ಎಂದು ಗ್ರಾಮಸ್ಥ ಹನುಮಂತ ನಾಯಕ್ ತಿಳಿಸಿದರು.
ಗ್ರಾಮದ ಕೆರೆಯಲ್ಲಿ ಪ್ರಸಕ್ತ ಸಾಲಿನಲ್ಲಿ ನೀರು ಸಂಗ್ರಹವಾಗದೆ ಇದ್ದುದರಿಂದ ಅದು ಸಂಪೂರ್ಣ ಬತ್ತಿದೆ. ಜಿಲ್ಲಾ ಪಂಚಾಯಿತಿ, ತಾ.ಪಂ. ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನೀರು ಸರಬರಾಜು: ಆಮದಿಹಾಳ ಗ್ರಾಮದಲ್ಲಿ ವಿದ್ಯುತ್ ಇದ್ದರೆ ಮಾತ್ರ ಕುಡಿಯುವ ನೀರು ಸಿಗುತ್ತದೆ. ಕಿರು ನೀರು ಸರಬರಾಜು ಯೋಜನೆಯಿಂದ ತೆರೆದ ಬಾವಿಗೆ ನೀರು ಸರಬರಾಜು ಮಾಡುತ್ತಿದ್ದು, ಬಾವಿಯಲ್ಲಿ ಬೀಳುವ ನೀರು ಪಡೆಯಲು ಜೀವದ ಹಂಗು ತೊರೆದು ನಿಲ್ಲುವಂತಾಗಿದೆ. ಇದ್ದ ಕುಡಿಯವ ನೀರು ಸಂಗ್ರಹ ತೊಟ್ಟಿಗೆ ಹನಿ ನೀರು ಏರುವುದಿಲ್ಲ. ಕುಡಿವ ನೀರು ಪಡೆಯುವುದೇ ಹರಸಾಹಸ ಮಾಡುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬನ್ನಿಗೋಳ ಗ್ರಾ.ಪಂ. ವ್ಯಾಪ್ತಿಯ ಜನತಾಪುರ ಗ್ರಾಮದ ಕುಡಿಯುವ ನೀರು ಯೋಜನೆ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದೆ. ರಾಜಕೀಯ ತಿಕ್ಕಾಟದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ದೊರೆಯದಂತಾಗಿದೆ. ನಾಗಲಾಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳವನ್ನು ಹೊಂದಿದ್ದು ಗ್ರಾಮದ ಕುಡಿಯುವ ನೀರು ಯೋಜನೆ ಸ್ಥಗಿತಗೊಂಡಿದೆ. ದುರಸ್ತಿಗೊಳಿಸುವಲ್ಲಿ ಗ್ರಾ.ಪಂ. ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೆಹಳ್ಳದ ಒರತೆ ನೀರೇ ಗತಿಯಾಗಿದೆ. ಗ್ರಾಮದಲ್ಲಿ ಇರುವ ಕೈ ಪಂಪ್ಗಳು ಉಪ್ಪು ನೀರು ಹೊಂದಿದ್ದರಿಂದ ಕುಡಿಯಲು ಯೋಗ್ಯವಾಗಿಲ್ಲ.
ಕಾಮಗಾರಿ ಕಳಪೆ: ಮಾರಲದಿನ್ನಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಮುಂದೆ ಮಹಿಳೆಯರು ನೀರಿಗಾಗಿ ಕಾಯಬೇಕಾದ ದುಸ್ಥಿತಿ. ಆರ್ಯಭೋಗಾಪುರ ಗ್ರಾಮದ ಕುಡಿಯುವ ನೀರು ಯೋಜನೆ ಇದ್ದೂ, ಇಲ್ಲದಂತಾಗಿದೆ. ನೀರು ಸಂಗ್ರಹಣೆ ತೊಟ್ಟಿಗೆ ಒಂದು ವರ್ಷದಿಂದ ಹನಿ ನೀರು ಸೇರಿಲ್ಲ. ಹಾಕಿದ ಪೈಪ್ಲೈನ್ ಕಾಮಗಾರಿ ಕಳಪೆಯಾಗಿದೆ. ನೀರು ಬಿಟ್ಟರೆ ಪೈಪ್ಗಳು ಎಲ್ಲೆಂದರಲ್ಲಿ ಒಡೆಯುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸರ್ಕಾರ ಪ್ರತಿ ವರ್ಷ ಕುಡಿಯುವ ನೀರು ಸರಬರಾಜಿಗೆ ಕೋಟ್ಯಂತರ ರು ಬಿಡುಗಡೆ ಮಾಡುತ್ತಿದೆ. ಸಮಸ್ಯಾತ್ಮಕ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತಾಲೂಕು ಆಡಳಿತ ಮುಂದಾಗಬೇಕಿದೆ. ಆದರೆ ಇದುವರೆಗೂ ಎಲ್ಲಿಯೂ ನೀರು ಸರಬರಾಜು ಮಾಡುತ್ತಿಲ್ಲ ಎಂದು ಹೇಳಲಾಗುತ್ತದೆ. ತಾಲೂಕು ಆಡಳಿತ ಗಾಢನಿದ್ರೆಯಿಂದ ಎಚ್ಚೆತ್ತು ನೀರಿನ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರಿಂದ ಸ್ಪರ್ಧೆಗೆ ಇಳಿದವರು ಛೀಮಾರು ಹಾಕಿಸಿಕೊಳ್ಳಬೇಕಾಗುತ್ತದೆ.